ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ ; ಸಾಮೂಹಿಕ ಅತ್ಯಾಚಾರದ ಶಂಕೆ
ಸಾಂದರ್ಭಿಕ ಚಿತ್ರ
ಕೋಲ್ಕತಾ : ಕೋಲ್ಕತಾದ ಪ್ರತಿಷ್ಠಿತ ಸರಕಾರಿ ವೈದ್ಯಕೀಯ ಕಾಲೇಜ್ ನಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ.
ಅತ್ಯಾಚಾರಕ್ಕೊಳಗಾಗಿ ಕೊಲೆಯಾದ 31 ವರ್ಷ ವಯಸ್ಸಿನ ಕಿರಿಯ ವೈದ್ಯೆಯ ದೇಹದಲ್ಲಿ ವೀರ್ಯವೆಂದು ಹೇಳಲಾದ ಭಾರೀ ಪ್ರಮಾಣದ ದ್ರವ ಇರುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ವೈದ್ಯೆಯು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿರುವ ಸಾಧ್ಯತೆಯನ್ನು ಇದು ಪುಷ್ಟೀಕರಿಸುತ್ತದೆ ಎಂದು ಮಾಧ್ಯಮ ಸಂಸ್ಥೆಗಳ ವರದಿಗಳು ಬುಧವಾರ ತಿಳಿಸಿವೆ.
ಮೃತ ವೈದ್ಯೆಯ ಗುಪ್ತಾಂಗದೊಳಗೆ 151 ಮಿಲಿಗ್ರಾಂ ಪ್ರಮಾಣದ ದ್ರವಾಂಶವು ಪತ್ತೆಯಾಗಿರುವುದಾಗಿ ಮರಣೋತ್ತರ ಪರೀಕ್ಷಾ ವರದಿಯು ತಿಳಿಸಿದೆಯೆಂದು ವೈದ್ಯರೊಬ್ಬರು ಹೇಳಿರುವುದನ್ನು ಮಾಧ್ಯಮ ಸಂಸ್ಥೆಯ ವರದಿ ಉಲ್ಲೇಖಿಸಿದೆ. ಇಷ್ಟೊಂದು ಪ್ರಮಾಣದ ವೀರ್ಯವು ಒಬ್ಬ ವ್ಯಕ್ತಿಯದ್ದಾಗಿರಲಾರದು. ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಕೃತ್ಯದಲ್ಲಿ ಒಬ್ಬರಿಗಿಂತ ಅಧಿಕ ವ್ಯಕ್ತಿಗಳು ಶಾಮೀಲಾಗಿರುವುದನ್ನು ಇದು ಸೂಚಿಸುತ್ತದೆ ಎಂದು ಸರಕಾರಿ ವೈದ್ಯರ ಸಂಘದ ಅಖಿಲ ಭಾರತ ಒಕ್ಕೂಟದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಡಾ. ಸುಬರ್ಣಾ ಗೋಸ್ವಾಮಿ ತಿಳಿಸಿದ್ದಾರೆ.
ಎನ್ಡಿಟಿವಿ ಸುದ್ದಿಸಂಸ್ಥೆಗೂ ಮರಣೋತ್ತರ ಪರೀಕ್ಷಾ ವರದಿಯ ವಿವರಗಳು ಲಭ್ಯವಾಗಿದೆ. ಕೊಲೆಯಾದ ವೈದ್ಯೆಯ ದೇಹದಲ್ಲಿ ಪತ್ತೆಯಾಗಿರುವ ವೀರ್ಯದ ಪ್ರಮಾಣವು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಸಾಧ್ಯತೆಯನ್ನು ಪುಷ್ಟೀಕರಿಸುತ್ತದೆ ಎಂದು ಆರೋಪಿಸಿ ಆಕೆಯ ಪಾಲಕರು ಸಲ್ಲಿಸಿದ ಅರ್ಜಿಯನ್ನು ಅದು ವರದಿಯಲ್ಲಿ ಉಲ್ಲೇಖಿಸಿದೆ.
ಮೃತ ವೈದ್ಯೆಯ ಕೈಗಳು ಹಾಗೂ ಮುಖದ ಮೇಲೆ ಹರಿತವಾದ ಗಾಯಗಳಾಗಿದ್ದವು. ತೀವ್ರವಾದ ಥಳಿತದಿಂದಾಗಿ ಆಕೆ ಧರಿಸಿದ್ದ ಕನ್ನಡಕವು ಒಡೆದು, ಅದರ ಚೂರುಗಳು ಆಕೆಯ ಕಣ್ಣಿನೊಳಗೆ ಪ್ರವೇಶಿಸಿರುವುದಾಗಿ ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ. ತಲೆ ಹಾಗೂ ಕುತ್ತಿಗೆಗೂ ಗಾಯಗಳಾಗಿರುವುದಾಗಿ ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತಾ ಪೊಲೀಸರು ಸಂಜಯ್ ರಾಯ್ ಎಂಬ ನಾಗರಿಕ ಸ್ವಯಂಸೇವಕನನ್ನು ಬಂಧಿಸಿದ್ದರು. ಆಸ್ಪತ್ರೆಯೊಳಗೆ ಮುಕ್ತವಾಗಿ ಪ್ರವೇಶಿಸಲು ಈತನಿಗೆ ಅವಕಾಶವಿತ್ತು.
► ಪುತ್ರನ ಹೆಸರಿಗೆ ಕಳಂಕ ತರಲು ಸಂಚು : ಟಿಎಂಸಿ ಶಾಸಕನ ಆರೋಪ
ಈ ಮಧ್ಯೆ ಟಿಎಂಸಿ ಶಾಸಕ ಸೌಮೆನ್ ಮಹಾಪಾತ್ರ ಅವರು ಹೇಳಿಕೆಯೊಂದನ್ನು ನೀಡಿ, ತನ್ನ ಪಕ್ಷದ ಕಾರ್ಯಕರ್ತರ ಒಂದು ವರ್ಗವು ತನ್ನ ಕುಟುಂಬದ ಹಾಗೂ ತನ್ನ ಪುತ್ರನ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆಂದು ಆಪಾದಿಸಿದ್ದಾರೆ. ವೃತ್ತಿಯಲ್ಲಿ ವೈದ್ಯನಾಗಿರುವ ತನ್ನ ಪುತ್ರನಿಗೂ ಆರ್.ಜಿ.ಕಾರ್ ಆಸ್ಪತ್ರೆಯಲ್ಲಿ ನಡೆದ ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಅವರು ಹೇಳಿದ್ದಾರೆ.