ವಿವಾದಕ್ಕೆ ಗ್ರಾಸವಾದ ಕೋಲ್ಕತಾ ಮೇಯರ್ ಹಕೀಂ ಅವರ ‘ಬಹುಸಂಖ್ಯಾತ’ ಹೇಳಿಕೆ; ಬಿಜೆಪಿ ಖಂಡನೆ
ಫಿರ್ಹಾದ್ ಹಕೀಂ | PC : X/@FirhadHakim
ಕೋಲ್ಕತಾ: ‘‘ಶೀಘ್ರದಲ್ಲೇ ನಾವು ಬಹುಸಂಖ್ಯಾತರಾಗಲಿದ್ದೇವೆ’ ಎಂದು ಕೋಲ್ಕತಾ ಮೇಯರ್ ಫಿರ್ಹಾದ್ ಹಕೀಂ ಅವರು ಹೇಳಿದ್ದಾರೆನ್ನಲಾದ ಭಾಷಣದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿವಾದಕ್ಕೆ ಗ್ರಾಸವಾಗಿದೆ. ಪ್ರತಿಪಕ್ಷವಾದ ಬಿಜೆಪಿಯು ಫಿರ್ಹಾದ್ ಹಕೀಂ ಅವರ ಹೇಳಿಕೆಯನ್ನು ಖಂಡಿಸಿದ್ದು, ಕೋಲ್ಕತಾ ಮೇಯರ್ ಅವರು ಕೋಮು ದ್ವೇಷವನ್ನು ಕೆರಳಿಸಲು ಯತ್ನಿಸುತ್ತಿದೆಯೆಂದು ಆಪಾದಿಸಿದೆ.
‘‘ಕೋಲ್ಕತಾ ಮೇಯರ್ ಫಿರ್ಹಾದ್ ಹಕೀಂ ಅವರು ಶುದ್ಧ ವಿಷವನ್ನು ಕಾರಿದ್ದಾರೆ. ಅವರು ಬಹಿರಂಗವಾಗಿ ಕೋಮುದ್ವೇಷವನ್ನು ಪ್ರಚೋದಿಸುತ್ತಿದ್ದಾರೆ ಹಾಗೂ ಅಪಾಯಕಾರಿ ಕಾರ್ಯಸೂಚಿಯನ್ನು ಮುಂದೊತ್ತುತ್ತಿದ್ದಾರೆ. ಇದು ಕೇವಲ ದ್ವೇಷಭಾಷಣ ಮಾತ್ರವಲ್ಲ, ಭಾರತದಲ್ಲಿ ಬಾಂಗ್ಲಾದೇಶ ಮಾದರಿಯ ಪರಿಸ್ಥಿತಿಯನ್ನು ಸೃಷ್ಟಿಸಲು ರೂಪಿಸಿದ ನೀಲನಕಾಶೆ ಇದಾಗಿದೆ’’ ಎಂದು ಅದು ಟೀಕಿಸಿದೆ.
ಪಶ್ಚಿಮಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮುಜುಂದಾರ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ‘‘ಇಂಡಿಯಾ ಮೈತ್ರಿಕೂಟ ಯಾಕೆ ಮೌನವಾಗಿದೆ, ನಿಮ್ಮ ಅಷಾಡಭೂತಿತನ ಹಾಗೂ ಭಾರತ ವಿರೋಧಿ ಮನಸ್ಥಿತಿ ಬಯಲಾಗಿದೆ. ಇದೇನಾ ನಿಮ್ಮ ಭವಿಷ್ಯದ ದೂರದೃಷ್ಟಿ. ಪ್ರತಿಯೊಬ್ಬ ಭಾರತೀಯನೂ ಈ ಮನಸ್ಥಿತಿಯನ್ನು ಖಂಡಿಸಬೇಕಾಗಿದೆ. ನಮ್ಮ ದೇಶವು ಅದರ ಏಕತೆ ಹಾಗೂ ಸಮಗ್ರತೆಗೆ ಒಡ್ಡುವ ಬೆದರಿಕೆಗಳನ್ನು ಸಹಿಸಲಾರದು ’’ ಎಂದು ಬರೆದಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಫಿರ್ಹಾದ್ ಹಕೀಂ ಅವರು ಪ್ರಸಕ್ತ ಕೋಲ್ಕತಾದ ಮೇಯರ್ ಆಗಿದ್ದಾರೆ ಮತ್ತು ಮಮತಾ ಬ್ಯಾನರ್ಜಿ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರೂ ಆಗಿದ್ದಾರೆ. ವಿವಾದಕ್ಕೆ ತುತ್ತಾಗಿರುವ ಅವರ ಭಾಷಣದ ವೀಡಿಯೋದಲ್ಲಿ, ‘‘ ನಮ್ಮ ಸಮುದಾಯ ಬಂಗಾಳದ ಶೇ.33ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಆದಾಗ್ಯೂ ಭಾರತದಲ್ಲಿ ನಾವು ಒಟ್ಟು ಜನಸಂಖ್ಯೆಯ ಶೇ.17ರಷ್ಟಿದ್ದೇವೆ ಮತ್ತು ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳುತ್ತೇವೆ. ಆದರೆ ನಾವು ಅಲ್ಪಸಂಖ್ಯಾತರೆಂಬುದಾಗಿ ಎಂದೂ ಭಾವಿಸಿಲ್ಲ,. ಆದರೆ ನಾವು ಅಲ್ಪಸಂಖ್ಯಾತರೆಂದು ಎಂದೂ ಯೋಚಿಸಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಫಿರ್ಹಾದ್ 30 ಉಪಕ್ರಮದಡಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಹಕೀಂ ಅವರು ಈ ಹೇಳಿಕೆಯನ್ನು ನೀಡಿದ್ದರೆನ್ನಲಾಗಿದೆ.