ಕೋಲ್ಕತ್ತಾದ ಪ್ರಾಧ್ಯಾಪಕನ ಮೃತದೇಹ ಉತ್ತರಾಖಂಡದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆ
ಮೈನಾಕ್ ಪಾಲ್ (Photo: NDTV)
ಹೊಸದಿಲ್ಲಿ: ಕೋಲ್ಕತ್ತಾದ ಜಾದವ್ ಪುರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೋರ್ವರ ಮೃತದೇಹ ಕೈ ಮತ್ತು ಕತ್ತು ಸೀಳಿದ ಸ್ಥಿತಿಯಲ್ಲಿ ಉತ್ತರಾಖಂಡದ ಹೊಟೇಲ್ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಾದವ್ಪುರ ವಿವಿ ಪ್ರಾಧ್ಯಾಪಕ ಮೈನಾಕ್ ಪಾಲ್ ಅವರ ಮೃತದೇಹ ಲಾಲ್ಕುವಾನ್ ಪಟ್ಟಣದ ಹೋಟೆಲ್ ನಲ್ಲಿ ಪತ್ತೆಯಾಗಿದ್ದು, ಪಾಲ್ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪಾಲ್ ಕರೆಗಳನ್ನು ಸ್ವೀಕರಿಸದಿದ್ದಾಗ ಕುಟುಂಬಸ್ಥರು ಹೋಟೆಲ್ ರಿಸೆಪ್ಷನ್ ಗೆ ಕರೆ ಮಾಡಿ ವಿಚಾರಿಸಿದ್ದರು. ಹೊಟೇಲ್ ಸಿಬ್ಬಂದಿಗಳು ಪಾಲ್ ತಂಗಿದ್ದ ಕೊಠಡಿಗೆ ಹೋಗಿ ಪರಿಶೀಲಿಸಿದಾಗ ಶೌಚಾಲಯದಲ್ಲಿ ಕತ್ತು ಮತ್ತು ಕೈ ಸೀಳಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
ಇಬ್ಬರು ಸ್ನೇಹಿತರೊಂದಿಗೆ ಪಾಲ್ ಉತ್ತರಾಖಂಡಕ್ಕೆ ಪ್ರವಾಸಕ್ಕೆಂದು ತೆರಳಿದ್ದರು. ಅವರು ಶುಕ್ರವಾರ ರಾತ್ರಿ ಕೋಲ್ಕತ್ತಾಗೆ ಹಿಂತಿರುಗಬೇಕಿತ್ತು. ಆದರೆ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತದೇಹವನ್ನು ಕೋಲ್ಕತ್ತಾಕ್ಕೆ ಕೊಂಡೊಯ್ಯಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಮೈನಾಕ್ ಪಾಲ್ ಸಹೋದ್ಯೋಗಿಗಳು ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಜಾದವ್ಪುರ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪಾರ್ಥ ಪ್ರತಿಮ್ ರಾಯ್ ಈ ಕುರಿತು ಹೇಳಿಕೆಯನ್ನು ಹೊರಡಿಸಿದ್ದು, ಮೈನಾಕ್ ಪಾಲ್ ನಿಧನದಿಂದ ಆಘಾತವುಂಟಾಗಿದೆ ಎಂದು ಹೇಳಿದ್ದಾರೆ.