ಕೋಟಾ : ಜೆಇಇಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ಕೋಟಾ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ರಾಜಸ್ಥಾನದ ಕೋಟಾದ ವಿದ್ಯಾರ್ಥಿನಿಯೋರ್ವರು ಆತ್ಮಹತ್ಯೆಗೈದಿದ್ದಾರೆ ಎಂದು ndtv ವರದಿ ಮಾಡಿದೆ. ಕೋಚಿಂಗ್ ವಿದ್ಯಾರ್ಥಿಗಳು ಎದುರಿಸುವ ಪರೀಕ್ಷಾ ಸಂಬಂಧಿ ಒತ್ತಡ ತಾಳಲಾರದೆ ಜನವರಿಯಲ್ಲಿ ಇಲ್ಲಿಯವರೆಗೆ ಕೋಟಾದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೋಟಾದ ಬೋರ್ಖೆಡಾ ಪ್ರದೇಶದ 18 ವರ್ಷದ ನಿಹಾರಿಕಾ ಸಿಂಗ್ ತನ್ನ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಆಕೆಯ ಆತ್ಮಹತ್ಯೆಗೆ ಕಾರಣವೇನೆಂದು ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ನಿಹಾರಿಕಾ ಮೃತದೇಹದ ಬಳಿ ಸುಸೈಡ್ ನೋಟ್ ಪತ್ತೆಯಾಗಿದೆ. “ಮಮ್ಮಿ, ಪಾಪಾ, ನನಗೆ ಜೆಇಇ ಮಾಡಲಾಗುತ್ತಿಲ್ಲ. ಅದಕ್ಕೆ ಆತ್ಮಹತ್ಯೆ ಮಾಡುತ್ತಿದ್ದೇನೆ. ನಾನು ಸೋತಿದ್ದೇನೆ. ಕೆಟ್ಟ ಮಗಳು, ಕ್ಷಮಿಸಿ ಮಮ್ಮಿ, ಪಾಪಾ, ಇದು ನನಗಿರುವ ಕೊನೆಯ ಆಯ್ಕೆ,” ಎಂದು ಅವರು ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ನಿಹಾರಿಕಾ ಬ್ಯಾಂಕ್ ಉದ್ಯೋಗಿಯಾಗಿರುವ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದರು. ಪ್ರತಿ ದಿನ ಏಳರಿಂದ ಎಂಟು ಗಂಟೆ ಅಭ್ಯಸಿಸುತ್ತಿದ್ದರೂ ಒತ್ತಡ ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಉತ್ತರ ಪ್ರದೇಶದ ಮೊರಾದಾಬಾದ್ ಮೂಲದ ಮೊಹಮ್ಮದ್ ಝೈದ್ ಎಂಬವರು ಇತ್ತೀಚೆಗೆ ಕೋಟಾದಲ್ಲಿ ಆತ್ಮಹತ್ಯೆಗೈದಿದ್ದು ವರದಿಯಾಗಿತ್ತು.