ಕೋಟಾ: ಮತ್ತೋರ್ವ ನೀಟ್ ಆಕಾಂಕ್ಷಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ಕೋಟಾ: ಹತ್ತೊಂಬತ್ತು ವರ್ಷದ ನೀಟ್ ಆಕಾಂಕ್ಷಿಯೋರ್ವರು ಇಲ್ಲಿನ ತನ್ನ ಪಿ.ಜಿ. ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಈ ವರ್ಷ ಇಲ್ಲಿ ನಡೆದ 7ನೇ ಆತ್ಮಹತ್ಯೆ ಪ್ರಕರಣ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಸೌಮ್ಯಾ ಕುರ್ಮಿ ಎಂದು ಗುರುತಿಸಲಾಗಿದೆ. ಇವರು ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡಿಎಸ್ಪಿ ರಾಜೇಶ್ ಟೈಲರ್ ತಿಳಿಸಿದ್ದಾರೆ.
ಕುರ್ಮಿ ತನ್ನ ಕೊಠಡಿಯ ಬಾಗಿಲು ತೆರೆಯದಿದ್ದಾಗ, ಆಕೆಯ ಗೆಳೆಯರು ಬಾಗಿಲು ಒಡೆದಿದ್ದಾರೆ. ಆಗ ಆಕೆಯ ಮೃತದೇಹ ಪತ್ತೆಯಾಗಿದೆ.
ಉತ್ತರಪ್ರದೇಶದ ಲಕ್ನೋದ ಅಮೇಠಿ ಪಟ್ಟಣದ ನಿವಾಸಿ ಕುರ್ಮಿ ಇಲ್ಲಿನ ತರಬೇತು ಕೇಂದ್ರವೊಂದರಲ್ಲಿ ಕಳೆದ ಒಂದು ವರ್ಷದಿಂದ ನೀಟ್ ಗೆ ಸಿದ್ಧತೆ ನಡೆಸುತ್ತಿದ್ದರು. ಅವರು ತಿಂಗಳ ಹಿಂದೆ ಮಹಾವೀರ್ ನಗರದಲ್ಲಿರುವ ಈ ಪಿ.ಜಿ.ಗೆ ಸ್ಥಳಾಂತರಗೊಂಡಿದ್ದರು.
ಕುರ್ಮಿಯ ಕೊಠಡಿಯಲ್ಲಿ ಪತ್ರವೊಂದು ಪತ್ತೆಯಾಗಿದೆ. ಆದರೆ, ಆತ್ಮಹತ್ಯೆಯೊಂದಿಗೆ ಅದರ ಪ್ರಸ್ತುತತೆಯನ್ನು ಪೊಲೀಸರು ಇನ್ನಷ್ಟೇ ಪರಿಶೀಲಿಸಬೇಕಿದೆ ಎಂದು ರಾಜೇಶ್ ಟೈಲರ್ ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ಕುರ್ಮಿ ಅವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗಿದ್ದವು. ಅವರನ್ನು ಎಂಬಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ದಿನದ ಚಿಕಿತ್ಸೆ ಬಳಿಕ ಅವರು ಬಿಡುಗಡೆಗೊಂಡಿದ್ದರು ಎಂಬುದು ತನಿಖೆಯ ಸಂದರ್ಭ ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹೆತ್ತವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಜವಾಹರ್ ನಗರ್ ಎಸ್ಎಚ್ಒ ಕಮಲೇಶ್ ಕುಮಾರ್ ಶರ್ಮಾ ತಿಳಿಸಿದ್ದಾರೆ.