ಕೋಟಾ: ನೀಟ್ ಆಕಾಂಕ್ಷಿ ಆತ್ಮಹತ್ಯೆ
ಕೋಟಾ: ನೀಟ್ ಆಕಾಂಕ್ಷಿಯೋರ್ವ ಇಲ್ಲಿನ ನ್ಯೂ ರಾಜೀವ್ ಗಾಂಧಿ ನಗರ್ ಪ್ರದೇಶದಲ್ಲಿರುವ ಹಾಸ್ಟೆಲ್ ನಲ್ಲಿರುವ ತನ್ನ ಕೊಠಡಿಯಲ್ಲಿ ಮಂಗಳವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಯ ಕೇಂದ್ರವಾದ ಕೋಟಾದಲ್ಲಿ ಈ ವರ್ಷ ಸಂಭವಿಸಿದ ಮೊದಲ ಆತ್ಮಹತ್ಯೆ ಪ್ರಕರಣ ಇದಾಗಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಮುಹಮ್ಮದ್ ಝೈದ್ (19) ಎಂದು ಗುರುತಿಸಲಾಗಿದೆ. ಈತ ಉತ್ತರಪ್ರದೇಶದ ಮೊರದಾಬಾದ್ ನ ನಿವಾಸಿ ಎಂದು ಜವಾಹರ್ ನಗರ ಪ್ರದೇಶದ ಸರ್ಕಲ್ ಅಧಿಕಾರಿ ಡಿಎಸ್ಪಿ ಭವಾನಿ ಸಿಂಗ್ ಹೇಳಿದ್ದಾರೆ.
ಝೈದ್ ಎರಡನೇ ಬಾರಿ ನೀಟ್ ಪರೀಕ್ಷೆ ಬರೆಯಲು ನಗರದ ಕೋಚಿಂಗ್ ಸಂಸ್ಥೆಯೊಂದರಲ್ಲಿ ತರಬೇತಿ ಪಡೆಯುತ್ತಿದ್ದ. ಈತ ಮಂಗಳವಾರ ಸಂಜೆವರೆಗೂ ತನ್ನ ಕೊಠಡಿಯಿಂದ ಹೊರಗೆ ಬರದೇ ಇದ್ದಾಗ ಹಾಸ್ಟೆಲ್ ವಾರ್ಡನ್ ರಾತ್ರಿ ಸುಮಾರು 10.30ಕ್ಕೆ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಸಿಂಗ್ ತಿಳಿಸಿದ್ದಾರೆ.
ಝೈದ್ನ ಕೊಠಡಿಯಲ್ಲಿ ಸುಸೈಡ್ ನೋಟ್ ಪತ್ತೆಯಾಗಿಲ್ಲ. ಝೈದ್ ನ ಆತ್ಮಹತ್ಯೆ ಹಿಂದಿರುವ ಕಾರಣ ತನಿಖೆಯ ಬಳಿಕ ತಿಳಿದು ಬರಲಿದೆ ಎಂದು ಸಿಂಗ್ ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯ ಕೊಠಡಿಯಲ್ಲಿದ್ದ ಫ್ಯಾನ್ ಆತ್ಮಹತ್ಯೆ ತಡೆ ಸಾಧನ ಹೊಂದಿರಲಿಲ್ಲ. ಆದುದರಿಂದ ಈ ಹಾಸ್ಟೆಲ್ ಜಿಲ್ಲೆಯ ಹಾಸ್ಟೆಲ್ ಗಳಿಗೆ ರೂಪಿಸಲಾದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ. ಆದುದರಿಂದ ಹಾಸ್ಟೆಲ್ ಅನ್ನು ಕಪ್ಪು ಪಟ್ಟಿಗೆ ಸೇರಿಸಲು ಹಾಗೂ ಮುಟ್ಟುಗೋಲು ಹಾಕಿಕೊಳ್ಳಲು ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕೋಟಾ ಹಾಸ್ಟೆಲ್ ಅಸೋಸಿಯೇಶನ್ ಅಧ್ಯಕ್ಷ ನವೀನ್ ಮಿತ್ತಲ್ ತಿಳಿಸಿದ್ದಾರೆ.
ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆಯಲು ದೇಶಾದ್ಯಂತದಿಂದ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಆಗಮಿಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತು ಕೇಂದ್ರಗಳ ಕೇಂದ್ರವಾದ ಕೋಟಾದಲ್ಲಿ ಕಳೆದ ವರ್ಷ ಒಟ್ಟು 26 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.