ಕೋಟಾ : ತೀವ್ರ ಅನಾರೋಗ್ಯದಿಂದ ನೀಟ್ ಆಕಾಂಕ್ಷಿ ನಿಧನ
ಸಾಂದರ್ಭಿಕ ಚಿತ್ರ
ಕೋಟಾ : ವೈದ್ಯಕೀಯ ಶಿಕ್ಷಣದ ಪ್ರವೇಶಾತಿ ಪರೀಕ್ಷೆ (ನೀಟ್)ಗೆ ಬರೆಯಲು ರಾಜಸ್ತಾನದ ಕೋಟಾದಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬರು ರವಿವಾರ ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತ ಯುವಕ ಶಿವಂ ರಾಘವ್ (21) ಉತ್ತರಪ್ರದೇಶದ ಅಲಿಗಢ ಜಿಲ್ಲೆಯ ನಿವಾಸಿ. ದೇಹದ ಸಕ್ಕರೆ ಅಂಶದಲ್ಲಿ ಭಾರೀ ಹೆಚ್ಚಳ ಹಾಗೂ ಅಧಿಕ ರಕ್ತದೊತ್ತಡದಿಂದಾಗಿ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಎರಡು ದಿನಗಳ ಹಿಂದೆ ನಗರದ ಎಂಬಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶಿವಂ ರಾಘವ್ ಅವರು ಕಳೆದ ಮೂರು ವರ್ಷಗಳಿಂದ ನೀಟ್ ಪರೀಕ್ಷೆಗೆ ಬರೆಯಲು ಕೋಟಾದಲ್ಲಿ ತರಬೇತಿ ಪಡೆಯುತ್ತಿದ್ದರು. ಅವರು ನಗರದ ಹಾಸ್ಟೆಲ್ ಕೊಠಡಿಯೊಂದರಲ್ಲಿ ವಾಸವಾಗಿದ್ದರು.
ಶಿವಂ ರಾಘವ್ ಅವರು ಕಳೆದ ಆರು ತಿಂಗಳುಗಳಿಂದ ತೀವ್ರ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರು. ಶುಕ್ರವಾರ ಅವರ ದೇಹಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಅವರು ರವಿವಾರ ಮುಂಜಾನೆ ಕೊನೆಯಸಿರೆಳೆದರೆಂದು ಕುನ್ಹಾರಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ರಾಜಾರಾಮ್ ತಿಳಿಸಿದ್ದಾರೆ
ವಿದ್ಯಾರ್ಥಿಯ ಮೃತದೇಹವನ್ನು ಪಾಲಕರಿಗೆ ಹಸ್ತಾಂತರಿಸಲಾಗಿದೆ. ರಾಘವ್ ಕಳೆದ ವರ್ಷದ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದರೂ, ಸರಕಾರಿ ವೈದ್ಯಕೀಯ ಕಾಲೇಜ್ನಲ್ಲಿ ಪ್ರವೇಶ ಪಡೆಯಲು ವಿಫಲರಾಗಿದ್ದರೆಂದು ಆತನ ಪಾಲಕರು ತಿಳಿಸಿದ್ದಾರೆ.
ಕೋಟಾದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಅನಾರೋಗ್ಯದಿಂದ ವಿದ್ಯಾರ್ಥಿ ಮೃತಪಟ್ಟ ಎರಡನೆ ಘಟನೆ ಇದಾಗಿದೆ. ಗುರುವಾರ 12ನೇ ತರಗತಿ ವಿದ್ಯಾರ್ಥಿ ಪರಿಣಿತ್ರಾಜ್ ರಾಯ್ (18) ಎಂಬವರು ತೀವ್ರ ಅಸ್ವಸ್ಥಗೊಂಡ ಬಳಿಕ ಎಂಬಿಎಸ್ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಆತ ನಿಧನರಾದರು.