ಭಾರತ-ಮ್ಯಾನ್ಮಾರ್ ಗಡಿಯಲ್ಲಿನ ಬೇಲಿ ನಿರ್ಮಾಣಕ್ಕೆ ಭೂಮಿ ನಿರಾಕರಿಸುವಂತೆ ಮೊರೇಹ್ ನಿವಾಸಿಗಳಿಗೆ ಕುಕಿ ಸಂಘಟನೆಗಳ ಕರೆ

PC : PTI
ಇಂಫಾಲ: ಭಾರತ-ಮ್ಯಾನ್ಮಾರ್ ಗಡಿಗುಂಟ ಬೇಲಿ ನಿರ್ಮಿಸಲು ಮುಂದಾಗಿದ್ದ ಕೇಂದ್ರ ಸರಕಾರಕ್ಕೆ ಹಿನ್ನಡೆಯುಂಟಾಗಿದ್ದು, ಗಡಿಯಲ್ಲಿನ ಬೇಲಿ ನಿರ್ಮಾಣಕ್ಕೆ ಭೂಮಿ ನಿರಾಕರಿಸುವಂತೆ ಮೊರೇಹ್ ನ ಕನಿಷ್ಠ ಏಳು ಪ್ರಭಾವಶಾಲಿ ಕುಕಿ ಸಮುದಾಯದ ಸಂಘಟನೆಗಳು ಮಣಿಪುರದ ಗಡಿ ಗ್ರಾಮವಾದ ಮೊರೇಹ್ ನ ನಿವಾಸಿಗಳಿಗೆ ಕರೆ ನೀಡಿವೆ.
ಭಾರತ-ಮ್ಯಾನ್ಮಾರ್ ಗಡಿ ನಡುವೆ ಬೇಲಿ ನಿರ್ಮಾಣ ಮಾಡಿದರೆ, ಎರಡೂ ಗಡಿಗಳಲ್ಲಿ ವಾಸಿಸುತ್ತಿರುವ ಕುಕಿ ಸಮುದಾಯಗಳು ವಿಭಜನೆಗೊಳ್ಳಲಿವೆ. ಹೀಗಾಗಿ, ಗಡಿಯಲ್ಲಿ ಬೇಲಿ ನಿರ್ಮಿಸಲು ಮುಂದಾಗಿರುವ ಕೇಂದ್ರ ಸರಕಾರದ ಈ ನಡೆಯನ್ನು ವಿರೋಧಿಸಬೇಕು ಎಂದು ಮೊರೇಹ್ ನ ಪ್ರಭಾವಶಾಲಿ ಕುಕಿ ಸಮುದಾಯ ಮುಖ್ಯಸ್ಥರ ಸಂಘಟನೆ ಮನವಿ ಮಾಡಿದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.
ಕುಕಿ ಸಮುದಾಯ ಮುಖ್ಯಸ್ಥರ ಸಂಘಟನೆಯ ಮನವಿಯನ್ನು ಅನುಮೋದಿಸಿದ್ದ ಮೊರೇಹ್ ನ ಕನಿಷ್ಠ ಆರು ಕುಕಿ ಸಂಘಟನೆಗಳು, ಬೇಲಿ ತಡೆಗೋಡೆಯಾಗಿ ಬದಲಾಗಲಿದ್ದು, ಸಮುದಾಯಗಳ ಜೀವನ ವಿಧಾನ ಹಾಗೂ ಸಂಸ್ಕೃತಿಗೆ ಅಪಾಯ ತಂದೊಡ್ಡಲಿದೆ ಎಂದು ಸೋಮವಾರ ಸಂಜೆ ಕಳವಳ ವ್ಯಕ್ತಪಡಿಸಿದ್ದವು. ಕುಕಿ ಸಮುದಾಯವು ಮ್ಯಾನ್ಮಾರ್ ನಿಂದ ಭಾರತಕ್ಕೆ ಆಗಮಿಸಿರುವ ಅಕ್ರಮ ವಲಸಿಗರು ಎಂದು ಬಿಂಬಿಸುವ ಪ್ರಯತ್ನವನ್ನೂ ಅವು ಅಲ್ಲಗಳೆದಿದ್ದವು.
ಮೊರೇಹ್ ತೆಂಗ್ನೌಪಾಲ್ ಜಿಲ್ಲೆಯ ವ್ಯಾಪಾರಿ ನಗರವಾಗಿದ್ದು, ಕುಕಿಗಳ ಬಾಹುಳ್ಯ ಹೊಂದಿದೆ. ಮೇ 2023ರಲ್ಲಿ ಮೈಥೇಯಿಗಳು ಹಾಗೂ ಕುಕಿಗಳ ನಡುವೆ ಜನಾಂಗೀಯ ಸಂಘರ್ಷ ಸ್ಫೋಟಗೊಂಡ ನಂತರ, ಮೊರೇಹ್ ನಲ್ಲಿ ವಾಸಿಸುತ್ತಿದ್ದ ಮೈಥೇಯಿಗಳು ಕಣಿವೆ ಪ್ರದೇಶಕ್ಕೆ ಪರಾರಿಯಾಗಿದ್ದರು.