"ನಿಮ್ಮ ಬಟ್ಟೆ ಬಿಚ್ಚದಿದ್ದರೆ ಕೊಂದು ಬಿಡುತ್ತೇವೆ": ನಗ್ನ ಪೆರೇಡ್ ಮಾಡಿದ ಕುಕಿ ಮಹಿಳೆಯರಿಗೆ ಧಮಕಿ ಹಾಕಿದ್ದ ಮೈತಿ ಗುಂಪು
scroll.in ಜೊತೆ ಮಾತನಾಡಿದ ಒಬ್ಬ ಸಂತ್ರಸ್ತ ಮಹಿಳೆ
Screengrab : Twitter
ಇಬ್ಬರು ಕುಕಿ ಮಹಿಳೆಯರನ್ನು ದೊಡ್ಡ ಮೈತಿ ಪುರುಷರ ಗುಂಪೊಂದು ಸಂಪೂರ್ಣ ಬೆತ್ತಲೆಗೊಳಿಸಿ ಎಲ್ಲರೆದುರು ಮೆರವಣಿಗೆ ಮಾಡುತ್ತಿರುವ ವಿಡಿಯೋ ಮಣಿಪುರದಿಂದ ಹೊರಬಿದ್ದಿದೆ. ಆ ಪುರುಷರು ಎಲ್ಲರೆದುರೇ ಆ ಮಹಿಳೆಯರ ದೇಹದ ಜೊತೆ ಅತ್ಯಂತ ಅಸಭ್ಯವಾಗಿ ವರ್ತಿಸುವ ದೃಶ್ಯಗಳೂ ಆ ವಿಡಿಯೋದಲ್ಲಿವೆ. ಪುರುಷರು ಆಘಾತಗೊಂಡಿರುವ ಆ ಮಹಿಳೆಯರನ್ನು ಹೊಲಗಳಿಗೆ ಎಳೆದುಕೊಂಡು ಹೋಗುವಾಗ ಹಲವು ಯುವಕರು ಅವರ ಜೊತೆ ಹೋಗೋದನ್ನು ಆ ವೀಡಿಯೊದಲ್ಲಿ ಕಾಣಬಹುದು.
ಮೇ 4 ರಂದು ಕಾಂಗ್ಪೊಕ್ಪಿ ಜಿಲ್ಲೆಯ ಬಿ ಫೈನೋಮ್ ಎಂಬ ಹಳ್ಳಿಯ ಬಳಿ ಮೈತಿ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆಗಳು ಭುಗಿಲೆದ್ದ ಒಂದು ದಿನದ ನಂತರ ಈ ಘೋರ ದಾಳಿ ನಡೆದಿದೆ ಎಂದು ಗುಂಪಿನಿಂದ ದಾಳಿಗೊಳಗಾದ ಪೈಕಿ ಒಬ್ಬ ಮಹಿಳೆ scroll.in ಮಾತಾಡಿಸಿದಾಗ ಹೇಳಿದ್ದಾರೆ.
ಹತ್ತಿರದ ಹಳ್ಳಿಯಲ್ಲಿ ಮೈತಿ ಗುಂಪೊಂದು "ಮನೆಗಳನ್ನು ಸುಡುತ್ತಿದೆ" ಎಂದು ಗೊತ್ತಾದಾಗ ಆಕೆಯ ಕುಟುಂಬ ಮತ್ತು ಇತರರು ಪಕ್ಕದ ಲೇನ್ ಒಂದರ ಮೂಲಕ ತಪ್ಪಿಸಿಕೊಂಡರು, ಆದರೆ ಇವರು ಗುಂಪಿನ ಕೈಗೆ ಸಿಕ್ಕಿಬಿದ್ದರು ಎಂದು ಮಹಿಳೆ ಹೇಳಿದ್ದಾರೆ. ಆಕೆಯ ನೆರೆಯಾಕೆ ಮತ್ತು ಅವರ ಮಗನನ್ನು ಸ್ವಲ್ಪ ದೂರಕ್ಕೆ ಕರೆದೊಯ್ದು ಅಲ್ಲೇ ಕೊಂದಿದ್ದಾರೆ. ಆ ಬಳಿಕ ಗುಂಪು ಈ ಮಹಿಳೆಯರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿತು, "ನಿಮ್ಮ ಬಟ್ಟೆಗಳನ್ನು ಕಿತ್ತೆಸೆಯಿರಿ" ಎಂದು ಗುಂಪಿನಲ್ಲಿದ್ದವರು ಹೇಳಿದರು.
"ನಾವು ವಿರೋಧಿಸಿದಾಗ, "ನೀವು ನಿಮ್ಮ ಬಟ್ಟೆಗಳನ್ನು ತೆಗೆಯದಿದ್ದರೆ, ನಿಮ್ಮನ್ನು ನಾವು ಕೊಲ್ಲುತ್ತೇವೆ" ಎಂದು ನಲವತ್ತರ ಹರೆಯದ ಆ ಮಹಿಳೆಗೆ ಹೇಳಿದ್ದಾರೆ. " ನನ್ನನ್ನು ರಕ್ಷಿಸಿಕೊಳ್ಳಲು ನನ್ನ ಮೈಮೇಲಿದ್ದ ಪ್ರತಿಯೊಂದು ಉಡುಪುಗಳನ್ನು ನಾನು ತೆಗೆದೆ. ಆಗ ನನ್ನ 21 ವರ್ಷದ ಪಕ್ಕದ ಮನೆ ಯುವತಿಗೆ ಏನಾಗುತ್ತಿದೆ ಎಂಬುದರ ಬಗ್ಗೆ ತನಗೆ ತಿಳಿದಿಲ್ಲ, ಅವಳು ಸ್ವಲ್ಪ ದೂರದಲ್ಲಿದ್ದಳು" ಎಂದು ಆಕೆ ಹೇಳಿದ್ದಾರೆ.
ನಂತರ ಆಕೆಯನ್ನು ರಸ್ತೆಯ ಬಳಿಯಿರುವ ಗದ್ದೆಗೆ ಎಳೆದೊಯ್ದಿದ್ದಾರೆ. ಅಲ್ಲಿ "ಮಲಗಲು" ಆ ಪುರುಷರು ಹೇಳಿದರು ಎಂದು ಮಹಿಳೆ ಆರೋಪಿಸಿದ್ದಾರೆ. "ಅವರು ನನಗೆ ಹೇಳಿದಂತೆ ನಾನು ಮಾಡಿದೆ. ಮತ್ತೆ ಮೂವರು ಪುರುಷರು ನನ್ನನ್ನು ಸುತ್ತುವರೆದರು... ಅವರಲ್ಲಿ ಒಬ್ಬರು ಇನ್ನೊಬ್ಬರಿಗೆ, 'ಇವಳನ್ನು ಅತ್ಯಾಚಾರ ಮಾಡೋಣ' ಎಂದು ಹೇಳಿದರು, ಆದರೆ ಅಂತಿಮವಾಗಿ ಅವರು ಅತ್ಯಾಚಾರ ಮಾಡಲಿಲ್ಲ" ಎಂದು ಆ ಮಹಿಳೆ scroll.in ಗೆ ಹೇಳಿದ್ದಾರೆ.
ತಾನು "ಅದೃಷ್ಟಶಾಲಿ" ಎಂದ ಆ ಮಹಿಳೆ ಅವರು ಅತ್ಯಾಚಾರ ಮಾಡುವ ಮಟ್ಟಿಗೆ ಹೋಗಲಿಲ್ಲ , "ಆದರೆ ಅವರು ನನ್ನ ಸ್ತನಗಳನ್ನು ಹಿಡಿದರು," ಎಂದು ಹೇಳಿದ್ದಾರೆ. ಇನ್ನೊಬ್ಬ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆಮೇಲೆ ಗೊತ್ತಾಯಿತು.
ಆ ಬಗ್ಗೆ ಬಂದ ದೂರಿನ ಆಧಾರದ ಮೇಲೆ, ಮೇ 18 ರಂದು ಕಾಂಗ್ಪೋಕ್ಪಿ ಜಿಲ್ಲೆಯ ಸೈಕುಲ್ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೂನ್ಯ ಎಫ್ಐಆರ್ ಯಾವುದೇ ಪೊಲೀಸ್ ಠಾಣೆಗೆ ದೂರು ಸ್ವೀಕರಿಸಲು ಮತ್ತು ದಾಖಲಿಸಲು ಮತ್ತು ನಂತರ ಅದನ್ನು ಸಂಬಂಧಪಟ್ಟ ಠಾಣೆಗೆ ರವಾನಿಸಲು ಅವಕಾಶ ನೀಡುತ್ತದೆ.
"800 ರಿಂದ 1,000" ಸಂಖ್ಯೆಯ "ಅಪರಿಚಿತ ದುಷ್ಕರ್ಮಿಗಳ" ವಿರುದ್ಧ ಅತ್ಯಾಚಾರ ಮತ್ತು ಕೊಲೆಯ ಆರೋಪಗಳನ್ನು ಹೊರಿಸಲಾಗಿದೆ ಎಂದು ಸೈಕುಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದಲ್ಲಿ ಹಿಂಸಾಚಾರ ಪ್ರಾರಂಭವಾಗಿ ಒಂದು ದಿನದ ಬಳಿಕ ಅಂದರೆ ಮೇ 4ರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
“ಕೆಲವು ಅಪರಿಚಿತ ದುಷ್ಕರ್ಮಿಗಳ ಗುಂಪು ಎ ಕೆ ರೈಫಲ್ಸ್, ಎಸ್ ಎಲ್ ಆರ್ ನಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, INSAS ಮತ್ತು ಪಾಯಿಂಟ್ 303 ರೈಫಲ್ಸ್ ಇತ್ಯಾದಿಗಳ ಜೊತೆ ಮಣಿಪುರದ ದ್ವೀಪದ ಉಪ-ವಿಭಾಗದ ಕಾಂಗ್ಪೋಕ್ಪಿ ಜಿಲ್ಲೆಯ ನಮ್ಮ ಗ್ರಾಮವನ್ನು ಬಲವಂತವಾಗಿ ಪ್ರವೇಶಿಸಿತು . ನಂತರ ಗುಂಪೊಂದು ಗ್ರಾಮದಲ್ಲಿನ ಮನೆಗಳಿಗೆ ಬೆಂಕಿ ಹಚ್ಚಿ ಧ್ವಂಸ ಮಾಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಗ ತಮ್ಮನ್ನು ರಕ್ಷಿಸಿಕೊಳ್ಳಲು "ಕಾಡಿನ ಕಡೆಗೆ" ಪಲಾಯನ ಮಾಡುತ್ತಿದ್ದ ಐದು ಮಂದಿ ಈ ದಾಳಿ ಮಾಡಿದ ಗುಂಪಿನ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಐವರಲ್ಲಿ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಇದ್ದರು. ಅವರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರು: 56 ವರ್ಷದ ವ್ಯಕ್ತಿ, ಅವರ 19 ವರ್ಷದ ಮಗ ಮತ್ತು 21 ವರ್ಷದ ಮಗಳು. ಇಬ್ಬರು ಮಹಿಳೆಯರು, ಒಬ್ಬರು 42 ವರ್ಷ ಮತ್ತು ಇನ್ನೊಬ್ಬರು 52 ವರ್ಷ - ಸಹ ಆ ಗುಂಪಿನ ಭಾಗವಾಗಿದ್ದರು.
ಅರಣ್ಯಕ್ಕೆ ಹೋಗುವ ದಾರಿಯಲ್ಲಿ, ನಾಂಗ್ಪೋಕ್ ಸೆಕ್ಮೈ ಪೊಲೀಸ್ ಠಾಣೆಯ ತಂಡವು ಅವರನ್ನು "ಪಾರುಮಾಡಿತು" ಎಂದು ದೂರಿನಲ್ಲಿ ಸೇರಿಸಲಾಗಿದೆ. ಆದರೆ , ಪೊಲೀಸ್ ಠಾಣೆಯಿಂದ ಎರಡು ಕಿಮೀ ದೂರದಲ್ಲಿರುವ ಟೌಬು ಬಳಿ ಹಿಂಸಾತ್ಮಕ ಗುಂಪು ಅವರನ್ನುತಡೆಯಿತು ಮತ್ತು ಪೊಲೀಸ್ ಕಸ್ಟಡಿಯಿಂದ ಕಸಿದುಕೊಂಡಿತು" ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆ ಗುಂಪು ತಕ್ಷಣವೇ 56 ವರ್ಷದ ವ್ಯಕ್ತಿಯನ್ನು ಕೊಂದಿತು. ನಂತರ "ಮೂವರೂ ಮಹಿಳೆಯರನ್ನು ತಮ್ಮ ಬಟ್ಟೆಗಳನ್ನು ತೆಗೆಯುವಂತೆ ಒತ್ತಾಯಿಸಲಾಯಿತು ಮತ್ತು ಗುಂಪಿನ ಮುಂದೆ ವಿವಸ್ತ್ರಗೊಳಿಸಲಾಯಿತು". 21 ವರ್ಷದ ಮಹಿಳೆಯನ್ನು "ಹಾಡ ಹಗಲೇ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು", ಇತರ ಇಬ್ಬರು ಮಹಿಳೆಯರು "ತಮಗೆ ತಿಳಿದಿರುವ ಪ್ರದೇಶದ ಕೆಲವು ಜನರ ಸಹಾಯದಿಂದ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು" ಎಂದು ದೂರಿನಲ್ಲಿ ಆರೋಪಿಸಲಾಗಿದೆ.
21 ವರ್ಷದ "ಕಿರಿಯ ಸಹೋದರ ತನ್ನ ಸಹೋದರಿಯ ಮಾನ ಮತ್ತು ಜೀವನವನ್ನು ರಕ್ಷಿಸಲು ಪ್ರಯತ್ನಿಸಿದ. ಆದರೆ ಅವನನ್ನು ಗುಂಪು ಸ್ಥಳದಲ್ಲೇ ಕೊಂದು ಹಾಕಿತು " ಎಂದು ದೂರಿನಲ್ಲಿದೆ.
ಅಲ್ಪಸಂಖ್ಯಾತರು, ಆದಿವಾಸಿಗಳ ಮೇಲೆ ಇಂತಹ ಹತ್ಯಾಕಾಂಡ ಹಾಗು ಗುಂಪು ಹಿಂಸೆ ನಡೆಯುವಾಗ ದೇಶದ ಇತರೆಡೆ ಅನುಸರಿಸುವ ಪ್ಯಾಟರ್ನ್ ಅನ್ನೇ ಮಣಿಪುರದಲ್ಲೂ ಅನುಸರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕುಕಿ ಮಹಿಳೆಯರ ಮೇಲೆ ಈ ಘೋರ ದಾಳಿ ನಡೆಯುವ ಮೊದಲು ಮೈತಿ ಮಹಿಳೆಯರ ಮೇಲೆ ಕುಕಿ ಪುರುಷರು ಅತ್ಯಾಚಾರ ಮಾಡಿದ್ದಾರೆ ಎಂದು ಸುಳ್ಳು ಹರಡಲಾಗಿದೆ. ಇದರ ಮೂಲ ಎಡಿಸನ್ ಮೊಯಿರಾಂಗ್ಥೆಮ್ ಎಂಬವನು ಎಂಬ ಆರೋಪ ಕೇಳಿ ಬಂದಿದೆ.
ಈ ಮಹಿಳೆಯರ ಮೇಲಿನ ದಾಳಿಯ ವಿಷಯ ಎರಡೂವರೆ ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ಮಣಿಪುರದಲ್ಲಿ ಹಿಂಸೆಯನ್ನು ತಡೆಯುವಲ್ಲಿ ಅಲ್ಲಿನ ಬಿಜೆಪಿ ಸರಕಾರ ಮಾತ್ರವಲ್ಲ ದಿಲ್ಲಿಯಲ್ಲೂ ಇರುವ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ.