ಕುಂಭಮೇಳಕ್ಕೆ ಹೋಗುವ ರೈಲುಗಳಿಗೆ ಕಲ್ಲೆಸೆತ, ದಾಂಧಲೆ
►4 ಮೊಕದ್ದಮೆ ದಾಖಲಿಸಿದ ರೈಲ್ವೇ ಪೊಲೀಸರು

PC | PTI
ಪ್ರಯಾಗ್ರಾಜ್: ಕುಂಭಮೇಳಕ್ಕೆ ಹೋಗುವ ವಿಶೇಷ ರೈಲುಗಳ ಮೇಲೆ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಕಲ್ಲೆಸೆತ ಮತ್ತು ದಾಂಧಲೆ ನಡೆಸಿರುವುದಕ್ಕಾಗಿ ರೈಲ್ವೇ ರಕ್ಷಣಾ ಪಡೆ (ಆರ್ಪಿಎಫ್) ನಾಲ್ಕು ಮೊಕದ್ದಮೆಗಳನ್ನು ದಾಖಲಿಸಿದೆ.
ಈ ವಿಶೇಷ ರೈಲುಗಳನ್ನು ನಿಲ್ಲಿಸುವ ಪ್ರಯತ್ನವಾಗಿ ಅವುಗಳ ಮೇಲೆ ಜನರು ಕಲ್ಲೆಸೆಯುವುದನ್ನು ಮತ್ತು ದಾಂಧಲೆ ನಡೆಸುವುದನ್ನು ತೋರಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಬಳಿಕ ರೈಲ್ವೇ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ.
ರೈಲ್ವೇ ನಿಲ್ದಾಣಗಳ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಗುರುತಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಯಾಣಿಕರು ರೈಲುಗಳ ಕಿಟಿಕಿಗಳನ್ನು ಒಡೆಯುವ ಮೂರು ಘಟನೆಗಳು ಬಿಹಾರದ ಎಕ್ಮ, ಮಧುಬನಿ ಮತ್ತು ದಾನಾಪುರ ರೈಲ್ವೇ ನಿಲ್ದಾಣಗಳಿಂದ ವರದಿಯಾಗಿದೆ.
ಫೆಬ್ರವರಿ 12ರಂದು ಎಕ್ಮ ನಿಲ್ದಾಣದಲ್ಲಿ ಲಿಚ್ಚಾವಿ ಎಕ್ಸ್ಪ್ರೆಸ್ ರೈಲಿನತ್ತ ಕಲ್ಲುಗಳನ್ನು ತೂರಿದ ಘಟನೆಗೆ ಸಂಬಂಧಿಸಿ ರೈಲ್ವೇ ಕಾಯ್ದೆಯ ವಿಧಿ 153ರಡಿ ಛಾಪ್ರ ಜಂಕ್ಷನ್ನಲ್ಲಿರುವ ಆರ್ಪಿಎಫ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಫೆಬ್ರವರಿ 10ರಂದು ಮಧುಬನ್ ರೈಲು ನಿಲ್ದಾಣದಲ್ಲಿ, ಜನರು ಹತ್ತುವುದನ್ನು ತಡೆಯುವುದಕ್ಕಾಗಿ ರೈಲುಗಳ ಕಿಟಿಕಿಗಳು ಮತ್ತು ಬಾಗಿಲುಗಳನ್ನು ಒಳಗಿನಿಂದ ಮುಚ್ಚಲಾಗಿತ್ತು. ಆಗ ತಮ್ಮ ರೈಲು ತಪ್ಪುತ್ತದೆ ಎಂಬ ಆತಂಕದಿಂದ ಜನರು ಕಲ್ಲೆಸೆದು ಕಿಕಿಟಿ ಗಾಜುಗಳನ್ನು ಒಡೆದರು ಎಂದು ಆರೋಪಿಸಲಾಗಿದೆ.
‘‘ಫೆಬ್ರವರಿ 12ರಂದು, ಕತಿಹಾರ್ ರೈಲು ನಿಲ್ದಾಣದಲ್ಲಿ, ರೈಲೊಂದನ್ನು ಹತ್ತಲು ಯತ್ನಿಸುತ್ತಿದ್ದ ಜನರು ಇತರರು ರೈಲು ಹತ್ತದಂತೆ ತಡೆಯೊಡ್ಡಿದರು. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಾಕಲಾದ ಈ ಘಟನೆಯ ವೀಡಿಯೊ ಆಧಾರದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಕತಿಹಾರ್ ಆರ್ಪಿಎಫ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.