ಕುಂಭಮೇಳದಲ್ಲಿ ಬಯಲುಶೌಚ ಸಮಸ್ಯೆ; ಉತ್ತರ ಪ್ರದೇಶ ಸರಕಾರಕ್ಕೆ ಎನ್ಜಿಟಿ ನೋಟಿಸ್

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಮಹಾಕುಂಭಮೇಳದಲ್ಲಿ ಶೌಚಾಲಯಗಳ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು ಗಂಗಾನದಿ ದಂಡೆಯಲ್ಲಿ ವ್ಯಾಪಕವಾಗಿ ಬಯಲು ಶೌಚಕ್ಕೆ ಕಾರಣವಾಗಿದೆಯೆಂಬ ಆರೋಪಗಳಿಗೆ ಸಂಬಂಧಿಸಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್ಜಿಟಿ)ವು ಉತ್ತರಪ್ರದೇಶ ಸರಕಾರ, ಪ್ರಯಾಗರಾಜ್ ಮೇಳ ಪ್ರಾಧಿಕಾರ ಹಾಗೂ ಉತ್ತರಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿ (ಯುಪಿಪಿಸಿಬಿ)ಗೆ ಶನಿವಾರ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಮೂರ್ತಿ ಪ್ರಕಾಶ್ ಶ್ರೀವಾತ್ಸವ ನೇತೃತ್ವದ ಹಾಗೂ ತಜ್ಞ ಸದಸ್ಯ ಡಾ. ಎ. ಸೆಂಥಿಲ್ವೆಲ್ ಅವರನ್ನೊಳಗೊಂಡ ಹಸಿರು ನ್ಯಾಯಾಧೀಕರಣ ಪೀಠವು ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ಉತ್ತರವನ್ನು ಕೇಳಿದೆ. ಹಾಗೂ ಈ ಬಗ್ಗೆ ಮುಂದಿನ ಆಲಿಕೆಗಿಂತ ಒಂದು ವಾರ ಮುಂಚಿತವಾಗಿ ಉತ್ತರಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಪ್ರಕರಣದ ಮುಂದಿನ ಆಲಿಕೆಯು ಫೆಬ್ರವರಿ 24ರಂದು ನಡೆಯಲಿದೆ.
ಸೂಕ್ತ ಶೌಚಾಲಯ ಸೌಕರ್ಯಗಳ ಕೊರತೆಯಿಂದಾಗಿ ಲಕ್ಷಾಂತರ ಜನಸಾಮಾನ್ಯರು ಹಾಗೂ ಕುಟುಂಬಗಳು, ನಿರ್ವಾಹವಿಲ್ಲದೆ ಗಂಗಾ ನದಿಯ ದಂಡೆಯಲ್ಲಿ ಬಯಲು ಶೌಚ ಮಾಡಬೇಕಾಗಿ ಬಂದಿದೆ. ಈ ಬಗ್ಗೆ ಅಹವಾಲನ್ನು ಸಲ್ಲಿಸಿದವರು, ತಮ್ಮ ಆರೋಪಗಳಿಗೆ ಪೂರಕವಾದ ವೀಡಿಯೊಗಳನ್ನು ಒಳಗೊಂಡ ಪೆನ್ಡ್ರೈವ್ ಅನ್ನು ಲಗತ್ತಿಸಿದ್ದಾರೆಂದು ಎನ್ಜಿಟಿ ಗಮನಸೆಳೆದಿದೆ.
ಮಹಾಕುಂಭ ಮೇಳ ನಡೆಯುತ್ತಿರುವ ಸ್ಥಳದಲ್ಲಿ ಕಳಪೆ ಶೌಚಾಲಯದ ಸೌಲಭ್ಯಗಳಗೆ ಸಂಬಂಧಿಸಿ ದೊಡ್ಡ ಮಟ್ಟದಲ್ಲಿ ಮಾಲಿನ್ಯವನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರಕಾರದಿಂದ 10 ಕೋಟಿ ರೂ.ಪರಿಹಾರವನ್ನು ಕೋರಿ ನಿಪುಣ್ ಭೂಷಣ್ ಎಂಬವರು ಅರ್ಜಿಯನ್ನು ಸಲ್ಲಿಸಿದ್ದರು.
ತನ್ನ ಬೇಡಿಕೆಗೆ ಸಮರ್ಥನೆಯಾಗಿ ಭೂಷಣ್ ಅವರು ಮಾಲಿನ್ಯ ಎಸಗಿದವನು ಪರಿಹಾರ ನೀಡಬೇಕೆಂಬ ಸಿದ್ಧಾಂತವನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಪರಿಸರದಿಂದ ಉಂಟಾಗುವ ಹಾನಿಗಳ ವೆಚ್ಚವನ್ನು ಮಾಲಿನ್ಯವೆಸಗಿದವನು ಪಾವತಿಸುವುದನ್ನು ಪಾರಿಸರಿಕ ಕಾನೂನು ಕಡ್ಡಾಯಗೊಳಿಸಿದಿದೆ.
ಪರಿಸರದ ರಕ್ಷಣೆ ಹಾಗೂ ಸುಧಾರಣೆಗೆ ಆಡಳಿತವನ್ನು ಬಾಧ್ಯಸ್ಥವನ್ನಾಗಿಸುವ ಸಂವಿಧಾನದ 48ಎ ವಿಧಿಯನ್ನು ಉಲ್ಲಂಘಿಸುವ ಮೂಲಕ ಸರಕಾರವು ಕರ್ತವ್ಯಲೋಪವೆಸಗಿದೆಯೆಂದು ಅರ್ಜಿದಾರರು ಆಪಾದಿಸಿದ್ದಾರೆ.
ಒಂದು ವೇಳೆ 1.5 ಲಕ್ಷ ಜೈವಿಕ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿದ್ದರೂ, ಭಾರೀ ಸಂಖ್ಯೆಯಲ್ಲಿ ಹರಿದುಬರುತ್ತಿರುವ ಜನರ ನಿರ್ವಹಣೆಗೆ ಅಷ್ಟು ಸಾಕಾಗದೆಂದು ಅರ್ಜಿಯಲ್ಲಿ ಹೇಳಲಾಗಿದೆ.
ಗಂಗಾನದಿಯ ದಂಡೆಯಲ್ಲಿ ಮಾನವ ಮಲವು ಭಾರೀ ಪ್ರಮಾಣದಲ್ಲಿ ಸಂಗ್ರಹವಾಗಿರುವುದನ್ನು ಕುಂಭಮೇಳವನ್ನು ಸಂದರ್ಶಿಸಿರುವ ಯಾತ್ರಿಕರು ತೆಗೆದಿರುವ ವೀಡಿಯೊಗಳಲ್ಲಿ ದಾಖಲಾಗಿದ್ದು, ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಸುರಕ್ಷತೆಯ ಬಗ್ಗೆ ಗಂಭೀರ ಆತಂಕಗಳನ್ನು ಮೂಡಿಸಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಗಂಗಾನದಿಯಲ್ಲಿ ಫೆಕಾಲ್ ಕೊಲಿಫಾರ್ಮ್ ಮಟ್ಟವು ಪ್ರತಿ 100 ಲೀಟರ್ಗೆ 3300 ಎಂಪಿಎನ್ ಆಗಿದ್ದು, ಇದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ನಿಗದಿಪಡಿಸಿದ 2500 ಎಂಪಿಎನ್/100 ಮಿ.ಲೀ. ಅನುಮತಿಸಲ್ಪಟ್ಟ ಮಿತಿಯನ್ನು ಮೀರಿರುವುದನ್ನು ಕೂಡಾ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇಂತಹ ಮಾಲಿನ್ಯಗಳ ಇರುವಿಕೆಯು ಕಾಲರಾ, ಹೆಪಟೈಟಿಸ್ ಎ ಹಾಗೂ ಪೊಲಿಯೋದಂತಹ ಮಾರಣಾಂತಿಕ ರೋಗಗಳಿಗೆ ಕಾರಣವಾಗುತ್ತದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.