ಕುಂಭಮೇಳಕ್ಕೆ ಇಂದು ತೆರೆ: ಶಿವರಾತ್ರಿಯ ಪುಣ್ಯಸ್ನಾನಕ್ಕೆ ಮಹಾ ದಟ್ಟಣೆ

PC: PTI
ಪ್ರಯಾಗ್ ರಾಜ್: ಮಹಾಶಿವರಾತ್ರಿಯ ದಿನವಾದ ಬುಧವಾರ ಮಹಾಕುಂಭ ಮೇಳಕ್ಕೆ ಅಧಿಕೃತ ತೆರೆ ಬೀಳಲಿದ್ದು, ಕೊನೆಯ ಪವಿತ್ರ ಸ್ನಾನಕ್ಕಾಗಿ ತ್ರಿವೇಣಿ ಸಂಗಮದಲ್ಲಿ ದೊಡ್ಡ ಸಂಖ್ಯೆಯ ಭಕ್ತರು ಸೇರಿದ್ದಾರೆ.
ಶಿವರಾತ್ರಿಯ ಸಂದರ್ಭದಲ್ಲಿ ಪವಿತ್ರ ಸ್ನಾನ ಕೈಗೊಳ್ಳಲು ನಸುಕಿನಿಂದಲೇ ಜನಸಾಗರ ತ್ರಿವೇಣಿ ಸಂಗಮದತ್ತ ಧಾವಿಸುತ್ತಿದೆ. ಇಂದಿನ ಪುಣ್ಯ ಸ್ನಾನದೊಂದಿಗೆ ಆರು ವಾರಗಳ ಅವಧಿಯ ಕುಂಭಮೇಳ ಅಚರಣೆ ಕೊನೆಗೊಳ್ಳಲಿದೆ.
ಶಿವ- ಪಾರ್ವತಿಯರ ಪವಿತ್ರ ಮಿಲನದ ಶುಭ ಸಂದರ್ಭ ಎನ್ನಲಾದ ಶಿವರಾತ್ರಿಯ ದಿನಕ್ಕೆ ಹಿಂದೂಗಳಲ್ಲಿ ವಿಶೇಷ ಮಹತ್ವವಿದೆ. ಮಹಾಕುಂಭ ಮೇಳದಲ್ಲೂ ಈ ಸಂದರ್ಭ ಅತ್ಯಂತ ವಿಶಿಷ್ಟ ಎನಿಸಿದೆ. ಹಿಂದೂ ಪುರಾಣಗಳ ಪ್ರಕಾರ, ಸಮುದ್ರ ಮಥನದಲ್ಲಿ ಶಿವನ ಮಹತ್ವದ ಪಾತ್ರವು, ಅಮೃತ ಕುಂಭ ರೂಪುಗೊಳ್ಳಲು ಕಾರಣವಾಗಿದೆ. ಈ ಅಮೃತ ಕುಂಭ ಎನ್ನುವುದು ಕುಂಭ ಮೇಳದ ಮೂಲ ತಿರುಳಾಗಿದೆ.
ಜನವರಿ 13ರಂದು ಆರಂಭವಾಗಿರುವ ಮಹಾಕುಂಭ ಮೇಳ ಆರು ಪವಿತ್ರ ಸ್ನಾನಗಳಿಗೆ ಸಾಕ್ಷಿಯಾಗಿದ್ದು, ಪೌಷ ಪೂರ್ಣಿಮೆ (ಜನವರಿ 13), ಮಕರ ಸಂಕ್ರಾಂತಿ (ಜನವರಿ 14), ಮೌನಿ ಅಮಾವಾಸ್ಯೆ (ಜನವರಿ 29), ವಸಂತ ಪಂಚಮಿ (ಫೆಬ್ರುವರಿ 3), ಮಾಘಪೂರ್ಣಿಮೆ (ಫೆಬ್ರುವರಿ 12) ಮತ್ತು ಅಂತಿಮವಾಗಿ ಮಹಾಶಿವರಾತ್ರಿ (ಫೆಬ್ರುವರಿ 26)ಯಂದು ಭಕ್ತರು ಅಮೃತ ಸ್ನಾನ ಕೈಗೊಂಡಿದ್ದಾರೆ.
ಶಿವರಾತ್ರಿಯ ದಿನ ನಸುಕಿನಲ್ಲೇ ಜನಸಾಗರ ತ್ರಿವೇಣಿ ಸಂಗಮದತ್ತ ಮುಖಮಾಡಿದ್ದು, ಮಹಾದಟ್ಟಣೆಯ ಹಿನ್ನೆಲೆಯಲ್ಲಿ ಇಡೀ ಕುಂಭಮೇಳ ಪ್ರದೇಶವನ್ನು ವಾಹನ ರಹಿತ ವಲಯವನ್ನಾಗಿ ಘೋಷಿಸಲಾಗಿದೆ. ಭಕ್ತರು ತಮಗೆ ಸನಿಹ ಇರುವ ಘಾಟ್ ಗಳಲ್ಲಿ ಸ್ನಾನ ಕೈಗೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರ ಸಲಹೆ ಮಾಡಿದೆ.