8 ಕೋಟಿ ಭಕ್ತರಲ್ಲಿ ಭೀತಿ ತಪ್ಪಿಸಲು ಮಹಾಕುಂಭ ಕಾಲ್ತುಳಿತದ ಬಗ್ಗೆ ವಾಸ್ತವ ತಿಳಿಸಿಲ್ಲ : ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ (PTI)
ಲಕ್ನೋ : ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಜನವರಿ 29ರಂದು ನಡೆದ ಕಾಲ್ತುಳಿತದ ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ನಮ್ಮ ಸರಕಾರ ತ್ವರಿತವಾಗಿ ಕಾರ್ಯನಿರ್ವಹಿಸಿದೆ. ಭಕ್ತರಲ್ಲಿ ವ್ಯಾಪಕವಾದ ಭೀತಿಯನ್ನು ತಡೆಗಟ್ಟುವ ಜೊತೆಗೆ ಸಂತ್ರಸ್ತರಿಗೆ ಸಕಾಲಿಕ ವೈದ್ಯಕೀಯ ಸಹಾಯ ನೀಡಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದರು.
ಲಕ್ನೋದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್(ಐಐಎಂ) ಮತ್ತು ಭಾರತೀಯ ಅಂಚೆ ಸೇವೆಯ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಕಾಲ್ತುಳಿತದ ಸಂದರ್ಭದಲ್ಲಿ 8 ಕೋಟಿ ಭಕ್ತರು ಮತ್ತು ಸಾಧುಗಳು ಪ್ರಯಾಗ್ರಾಜ್ ಮತ್ತು ಕುಂಭಮೇಳ ಪ್ರದೇಶದಲ್ಲಿದ್ದರು. ಭಯವು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದು ಎಂದು ಘಟನೆಯನ್ನು ಹೆಚ್ಚು ಮುನ್ನಲೆಗೆ ತಂದಿಲ್ಲ ಮತ್ತು ಹೆಚ್ಚು ಪ್ರಚಾರಕ್ಕೆ ಅನುಮತಿ ಕೊಟ್ಟಿಲ್ಲ ಎಂದು ಹೇಳಿದರು.
ಮೌನಿ ಅಮಾವಾಸ್ಯೆಯಂದು ಸಂಗಮ ಘಾಟ್ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಮೃತಪಟ್ಟು, 60 ಮಂದಿ ಗಾಯಗೊಂಡರು. ಲಕ್ಷಾಂತರ ಭಕ್ತರಲ್ಲದೆ, 13 ಅಖಾಡಾಗಳ ದಾರ್ಶನಿಕರು, ಸಾಧುಗಳು ಅಂದು ಬೆಳಿಗ್ಗೆ ಧಾರ್ಮಿಕ ವಿಧಿವಿಧಾನದ 'ಅಮೃತ ಸ್ನಾನ' ಮಾಡಲು ನಿರ್ಧರಿಸಿದರು. ಪರಿಸ್ಥಿತಿಯನ್ನು ನಿರ್ವಹಿಸಲು ಆಚರಣೆಯನ್ನು ವಿಳಂಬಗೊಳಿಸಲು ನಾನು ವೈಯಕ್ತಿಕವಾಗಿ ಅವರಿಗೆ ವಿನಂತಿಸಿದೆ. ಅಧಿಕಾರಿಗಳು ಜನಸಂದಣಿಯನ್ನು ಸೂಕ್ಷ್ಮವಾಗಿ ನಿಭಾಯಿಸದರು. ಇಂತಹ ಕಠಿಣ ಸಂದರ್ಭಗಳಲ್ಲಿ, ಅನೇಕರು ಭಯಭೀತರಾಗುತ್ತಾರೆ. ಆದರೆ ತಾಳ್ಮೆ ಮತ್ತು ನಿಯಂತ್ರಣದೊಂದಿಗೆ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭವು ಪ್ರಪಂಚದಾದ್ಯಂತದ ಲಕ್ಷಾಂತರ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಜನಸಮೂಹ ನಿರ್ವಹಣೆ ಅಧಿಕಾರಿಗಳಿಗೆ ನಿರ್ಣಾಯಕ ಸವಾಲಾಗಿದೆ. ಈ ವರ್ಷ 66 ಕೋಟಿಗೂ ಹೆಚ್ಚು ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದು ಮಹಾಕುಂಭ ಮೇಳದ ಪ್ರಮುಖ ಯಶಸ್ಸನ್ನು ಸೂಚಿಸುತ್ತದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.