ಎಫ್ಐಆರ್ ಪ್ರಶ್ನಿಸಿ ಕುನಾಲ್ ಕಾಮ್ರಾ ಅರ್ಜಿ; ಪೊಲೀಸ್, ಸೇನಾ ಶಾಸಕನಿಗೆ ಹೈಕೋರ್ಟ್ ನೋಟಿಸ್

ಕುನಾಲ್ ಕಾಮ್ರಾ | PC : X
ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರನ್ನು ದ್ರೋಹಿ ಎಂದು ಕರೆದಿರುವ ಕುರಿತು ತನ್ನ ವಿರುದ್ಧ ದಾಖಲಿಸಲಾದ ಎಫ್ಐಆರ್ ಪ್ರಶ್ನಿಸಿ ಕಾಮೆಡಿಯನ್ ಕುನಾಲ್ ಕಾಮ್ರಾ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯ ಹಿನ್ನೆಲೆಯಲ್ಲಿ ಬಾಂಬೆ ಉಚ್ಚ ನ್ಯಾಯಾಲಯ ಮುಂಬೈ ಪೊಲೀಸ್ ಹಾಗೂ ಶಿವಸೇನಾ ಶಾಸಕ ಮುರ್ಜಿ ಪಟೇಲ್ಗೆ ಮಂಗಳವಾರ ನೋಟಿಸು ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಸಾರಂಗ್ ಕೊಟ್ವಾಲ್ ಹಾಗೂ ಎಸ್.ಎಂ. ಮೋದಕ್ ಅವರ ವಿಭಾಗೀಯ ಪೀಠ ಕಾಮ್ರಾ ಅವರ ಅರ್ಜಿಯನ್ನು ಎಪ್ರಿಲ್ 16ರಂದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ. ಮೂರು ಬಾರಿ ಸಮನ್ಸ್ ಜಾರಿಗೊಳಿಸಿದ ಹೊರತಾಗಿಯು ಕಾಮ್ರಾ ಅವರು ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲು ವಿಫಲರಾಗಿದ್ದಾರೆ.
ಸೇನಾ ಶಾಸಕ ಮುರ್ಜಿ ಪಟೇಲ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಮುಂಬೈಯ ಖಾರ್ ಪೊಲೀಸರು ಕಳೆದ ತಿಂಗಳು ಕಾಮ್ರಾ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು.
ಪ್ರತಿವಾದಿಗಳಿಗೆ (ಪೊಲೀಸ್ ಹಾಗೂ ಪಟೇಲ್) ನೋಟಿಸು ನೀಡಿ. ಅವರು ಸೂಚನೆಯನ್ನು ಗಮನಿಸಲಿ ಹಾಗೂ ಪ್ರತಿಕ್ರಿಯೆ ನೀಡಲಿ ಎಂದು ಎಂದು ಹೈಕೋರ್ಟ್ ಹೇಳಿದೆ.
ಕಾಮ್ರಾ ವಿರುದ್ಧ ನಾಸಿಕ್ ಗ್ರಾಮೀಣ, ಜಲಗಾಂವ್ ಹಾಗೂ ನಾಸಿಕ್ (ನಂದಗಾಂವ್)ನಲ್ಲಿ ದಾಖಲಿಸಲಾದ ಮೂರು ಎಫ್ಐಆರ್ ಗಳನ್ನು ಅನಂತರ ಖಾರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.