ಕುವೈತ್ ಅಗ್ನಿ ದುರಂತದ | ಕೇರಳದ 21 ಮಂದಿ ಮೃತ್ಯು ; ದೃಢಪಡಿಸಿದ ಸಿಎಂ
Photo: NDtv
ತಿರುವನಂತಪುರಂ :ದಕ್ಷಿಣ ಕುವೈತ್ನ ಮಂಗಾಫ್ನಲ್ಲಿ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತ 49 ಮಂದಿಯಲ್ಲಿ 21 ಮಲಯಾಳಿಗಳು ಸೇರಿದ್ದಾರೆ. ಈ ಕುರಿತು ಕೇರಳದ ಸಿಎಂ ಪಿಣರಾಯ್ ವಿಜಯನ್ ದೃಢಪಡಿಸಿದ್ದಾರೆ.
ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಘಟನೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಕುರಿತು ಸಹಕರಿಸಲು ಮತ್ತು ಶವಗಳನ್ನು ಮನೆಗೆ ತರಲು ಸಹಾಯ ಮಾಡಲು ಕುವೈತ್ಗೆ ತೆರಳುತ್ತಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೇರಳ ಸರ್ಕಾರದ ಅಧೀನದ ಅನಿವಾಸಿ ಕೇರಳೀಯರ(ಎನ್ಆರ್ಕೆ) ವೆಲ್ಫೇರ್ ಏಜೆನ್ಸಿಯ ಮೂಲಗಳು ಹಲವು ಮೃತದೇಹಗಳನ್ನು ಇನ್ನೂ ಗುರುತಿಸಬೇಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದೆ. ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಹಲವು ಮಲಯಾಳಿಗಳು ಕೂಡ ಸೇರಿದ್ದಾರೆ.
ಈ ಕುರಿತು ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಶೇಷ ಸಂಪುಟ ಸಭೆಯನ್ನು ಕರೆದಿದ್ದಾರೆ. ಇದಲ್ಲದೆ ಜಗತ್ತಿನಾದ್ಯಂತ ಇದ್ದ ಅನಿವಾಸಿ ಕೇರಳಿಯರ ವೆಲ್ಫೇರ್ ಏಜೆನ್ಸಿಯ ಪ್ರತಿನಿಧಿಗಳ ಸಮಾವೇಶ ‘ಲೋಕ ಕೇರಳ ಸಭೆ’ ಯನ್ನು ಗುರುವಾರದಿಂದ ಶನಿವಾರದವರೆಗೆ ತಿರುವನಂತಪುರದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಅವಘಡದ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಮೃತರನ್ನು ಕೊಟ್ಟಾಯಂನ ಚಂಗನಾಶ್ಸೆರಿಯ ಶ್ರೀಹರಿ ಪಿ(27), ಮಲಪ್ಪುರಂನ ಪೆರಿಂತಲ್ಮನ್ನ ಬಾಹುಲೇಯನ್(36), ಕೊಲ್ಲಂನ ಶಮೀರ್ ಉಮರುದ್ದೀನ್(30) ಚೆಂಗಳದ ಕೆ ರೆಂಜಿತ್(34), ಕಾಸರಗೋಡಿನ ಪಿಲಿಕೋಡುವಿನ ಕೇಲು (58) ಕೊಟ್ಟಾಯಂನ ಸ್ಟೆಫಿನ್ ಅಬ್ರಹಾಂ ಸಾಬು(29), ಪತ್ತನಂತಿಟ್ಟದ ಪಂದಳಂನ ಆಕಾಶ್ ಶಶಿಧರನ್(31), ಕೊಲ್ಲಂನ ಪುನಲೂರಿನ ಸಾಜನ್ ಜಾರ್ಜ್(29), ಪತ್ತನಂತಿಟ್ಟಾದಲ್ಲಿ ಸಾಜು ವರ್ಗೀಸ್ (56), ಪತ್ತನಂತಿಟ್ಟದ ಪಿ ವಿ ಮುರಳೀಧರನ್(68), ಕೊಲ್ಲಂನ ಲುಕೋಸ್(48), ತಿರುವಲ್ಲಾದ ಥಾಮಸ್ ಉಮ್ಮನ್(37) ಮತ್ತು ಮಲಪ್ಪುರಂನ ನೂಹು ಎಂದು ಹೇಳಲಾಗಿದೆ.