ಉತ್ತರ ಭಾರತದಲ್ಲಿ ಚಳಿ ಕೊರತೆಗೆ ‘ಪಶ್ಚಿಮದ ಅಂಶಗಳ’ ನಿಷ್ಕ್ರೀಯತೆ ಕಾರಣ ; ಭಾರತೀಯ ಹವಾಮಾನ ಇಲಾಖೆ
ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ಹಿಂಗಾರು ಅವಧಿಯಲ್ಲಿ ಉತ್ತರ ಭಾರತಕ್ಕೆ ಮಳೆ ತರುವ ‘ಪಶ್ಚಿಮದ ಅಂಶ’ಗಳ ನಿಷ್ಕ್ರೀಯತೆಗೆ ದೇಶದ ವಾಯುವ್ಯ ಭಾಗ ಮತ್ತು ಪಶ್ಚಿಮ ಹಿಮಾಲಯದ ಹವಾಮಾನ ವೈಪರೀತ್ಯಗಳು, ಶಾಂತ ಸಾಗರದಲ್ಲಿ ತಲೆದೋರಿರುವ ಎಲ್ ನಿನೋ ಹಾಗೂ ಉತ್ತರ ಭಾರತದಲ್ಲಿ ವೇಗವಾಗಿ ಬೀಸುತ್ತಿರುವ ಗಾಳಿ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಹೇಳಿದೆ.
‘‘ಪಶ್ಚಿಮದ ಅಂಶಗಳು’’ ಎಂದರೆ ಒಂದು ಹವಾಮಾನ ವ್ಯವಸ್ಥೆಯಾಗಿದೆ. ಈ ಹವಾಮಾನ ವ್ಯವಸ್ಥೆಯಿಂದಾಗಿ ಮೆಡಿಟರೇನಿಯನ್ ಸಮುದ್ರದಲ್ಲಿ ಸೃಷ್ಟಿಯಾಗುವ ಮಾರುತವು ಪೂರ್ವಾಭಿಮುಖವಾಗಿ ಚಲಿಸುತ್ತಾ ದಾರಿಯುದ್ದಕ್ಕೂ ತೇವಾಂಶವನ್ನು ಹೀರಿಕೊಂಡು ವಾಯುವ್ಯ ಭಾರತಕ್ಕೆ ಮುಂಗಾರೋತ್ತರ ಮಳೆ ತರುತ್ತದೆ.
ಈ ಚಳಿಗಾಲದಲ್ಲಿ ದೇಶದ ಮೂಲಕ ಎರಡು ಇಂಥ ‘ಪಶ್ಚಿಮದ ಅಂಶಗಳ’ ಮಾರುತ ಹಾದು ಹೋಗಿವೆ, ಆದರೆ ಅವುಗಳ ಪ್ರಭಾವ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿದೆ. ಅದರ ಫಲವಾಗಿ, ಈ ಋತುವಿನಲ್ಲಿ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಿಮಾಲಯ ವಲಯದಲ್ಲಿ ಅಲ್ಪ ಹಿಮಪಾತವಾಗಿದೆ ಅಥವಾ ಹಿಮಪಾತವೇ ಆಗಿಲ್ಲ ಎಂದು ಇಲಾಖೆ ತಿಳಿಸಿದೆ.
ಭೂಮಧ್ಯ ರೇಖೆ ವಲಯದಲ್ಲಿ ಬರುವ ಶಾಂತ ಸಾಗರದಲ್ಲಿ ಬಿಸಿ ವಾತಾವರಣ ನೆಲೆಸುವುದನ್ನು ಎಲ್ ನಿನೋ ಎಂದು ಕರೆಯಲಾಗುತ್ತದೆ. ಇಂಥ ಪರಿಸ್ಥಿತಿ ಇದ್ದಾಗಲೆಲ್ಲ ಉತ್ತರ ಭಾರತದಲ್ಲಿ ಶೀತಲ ದಿನಗಳ ಸಂಖ್ಯೆಯಲ್ಲಿ ಇಳಿಕೆಯಾಗುವುದು ಇತಿಹಾಸದಲ್ಲಿ ದಾಖಲಾಗಿದೆ.