ಪ್ಯಾಂಗಾಂಗ್ ಸರೋವರದ ದಡದಲ್ಲಿ ಸೇನೆಯಿಂದ ಶಿವಾಜಿ ಪ್ರತಿಮೆ ಸ್ಥಾಪನೆಯ ಪ್ರಸ್ತುತತೆ ಪ್ರಶ್ನಿಸಿದ ಲಡಾಖ್ ಕೌನ್ಸಿಲರ್
PC : X \ @firefurycorps
ಲೇಹ್ : ಭಾರತ ಮತ್ತು ಚೀನಾ ನಡುವಿನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ)ಯು ಹಾದುಹೋಗಿರುವ ಪ್ಯಾಂಗಾಂಗ್ ತ್ಸೋ ಸರೋವರದ ದಡದಲ್ಲಿ ಭಾರತೀಯ ಸೇನೆಯು ಸ್ಥಾಪಿಸಿರುವ ಮರಾಠಾ ದೊರೆ ಛತ್ರಪತಿ ಶಿವಾಜಿ ಪ್ರತಿಮೆಯ ಪ್ರಸ್ತುತತೆಯನ್ನು ಲಡಾಖ್ ನ ಚುಷುಲ್ ಕೌನ್ಸಿಲರ್ ಕೊಂಚಾಕ್ ಸ್ಟ್ಯಾಂಝಿನ್ ಪ್ರಶ್ನಿಸಿದ್ದಾರೆ.
ಪ್ರತಿಮೆ ನಿರ್ಮಾಣದಲ್ಲಿ ಸ್ಥಳೀಯರೊಂದಿಗೆ ಸಮಾಲೋಚನೆಯ ಕೊರತೆಯನ್ನು ಟೀಕಿಸಿದ ಸ್ಟ್ಯಾಂಝಿನ್,ಸಮುದಾಯ ಮತ್ತು ಪ್ರಕೃತಿಯನ್ನು ಉತ್ತಮವಾಗಿ ಪ್ರತಿಬಿಂಬಿಸುವ ಮತ್ತು ಗೌರವಿಸುವ ಯೋಜನೆಗಳತ್ತ ಗಮನ ಹರಿಸುವಂತೆ ಕರೆ ನೀಡಿದರು.
SHRI CHHATRAPATI SHIVAJI MAHARAJ STATUE AT PANGONG TSO, LADAKH
— @firefurycorps_IA (@firefurycorps) December 28, 2024
On 26 Dec 2024, a majestic statue of Shri Chhatrapati Shivaji Maharaj was inaugurated on the banks of Pangong Tso at an altitude of 14,300 feet.
The towering symbol of valour, vision and unwavering justice was… pic.twitter.com/PWTVE7ndGX
‘ಓರ್ವ ಸ್ಥಳೀಯ ನಿವಾಸಿಯಾಗಿ ನಾನು ಪ್ಯಾಂಗಾಂಗ್ ನಲ್ಲಿಯ ಶಿವಾಜಿ ಪ್ರತಿಮೆಯ ಬಗ್ಗೆ ನನ್ನ ಕಳವಳಗಳನ್ನು ವ್ಯಕ್ತಪಡಿಸಲೇಬೇಕು. ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸದೆ ಅದನ್ನು ಸ್ಥಾಪಿಸಲಾಗಿದೆ ಮತ್ತು ನಮ್ಮ ವಿಶಿಷ್ಟ ಪರಿಸರ ಮತ್ತು ವನ್ಯಜೀವಿ ವ್ಯವಸ್ಥೆಗೆ ಅದರ ಪ್ರಸ್ತುತತೆಯನ್ನು ನಾನು ಪ್ರಶ್ನಿಸುತ್ತೇನೆ. ನಮ್ಮ ಸಮುದಾಯ ಮತ್ತು ಪ್ರಕೃತಿಯನ್ನು ನಿಜವಾಗಿಯೂ ಪ್ರತಿಬಿಂಬಿಸುವ ಮತ್ತು ಗೌರವಿಸುವ ಯೋಜನೆಗಳಿಗೆ ಆದ್ಯತೆ ನೀಡೋಣ’ ಎಂದು ಅವರು ಹೇಳಿದರು.
‘ಫೈರ್ ಆ್ಯಂಡ್ ಫ್ಯುರಿ ಕಾರ್ಪ್ಸ್ನ ಜನರಲ್ ಆಫೀಸರ್ ಕಮಾಂಡಿಂಗ್ ಹಾಗೂ ಮರಾಠಾ ಲೈಟ್ ಇನ್ ಫ್ಯಾಂಟ್ರಿಯ ಕರ್ನಲ್ ಆದ ಲೆ.ಜ.ಹಿತೇಶ ಭಲ್ಲಾ ಅವರು ಡಿ.26ರಂದು ಛತ್ರಪತಿ ಶಿವಾಜಿ ಮಹಾರಾಜರ ಭವ್ಯವಾದ ಪ್ರತಿಮೆಯನ್ನು ಸಮುದ್ರಮಟ್ಟದಿಂದ 14,300 ಅಡಿ ಎತ್ತರದಲ್ಲಿ ಪ್ಯಾಂಗಾಂಗ್ ತ್ಸೋ ಸರೊವರದ ದಡದಲ್ಲಿ ಅನಾವರಣಗೊಳಿಸಿದ್ದಾರೆ. ಈ ಭವ್ಯ ಪ್ರತಿಮೆಯು ಶೌರ್ಯ, ದೂರದೃಷ್ಟಿ ಮತ್ತು ಅಚಲ ನ್ಯಾಯದ ಸಂಕೇತವಾಗಿದೆ. ಶಿವಾಜಿ ಮಹಾರಾಜರ ಪರಂಪರೆಯು ತಲೆಮಾರುಗಳಿಂದಲೂ ಸ್ಫೂರ್ತಿಯ ಮೂಲವಾಗಿದೆ’ ಎಂದು ಭಾರತಿಯ ಸೇನೆಯು ಎಕ್ಸ್ ಪೋಸ್ಟ್ ನಲ್ಲಿ ಹೇಳಿದೆ.
ಭಾರತ ಮತ್ತು ಚೀನಾ ನಡುವೆ ಕೊನೆಯ ಎರಡು ಸಂಘರ್ಷ ತಾಣಗಳಾಗಿದ್ದ ಡೆಮ್ಚೋಕ್ ಮತ್ತು ಡೆಸ್ಪಾಂಗ್ಗಳಲ್ಲಿ ಸೇನೆಯನ್ನು ಹಿಂದೆಗೆದುಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ಸುಮಾರು ನಾಲ್ಕೂವರೆ ವರ್ಷಗಳ ಗಡಿ ಬಿಕ್ಕಟ್ಟಿಗೆ ಅಂತ್ಯ ಹಾಡಿದ ಕೆಲವೇ ವಾರಗಳಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರದೇಶದಲ್ಲಿ ಸ್ಥಾಪನೆಗೊಂಡಿದೆ.
ಈ ವರ್ಷ ಸೋನಮ್ ವಾಂಗ್ ಚುಕ್ ಸೇರಿದಂತೆ ಸಾವಿರಾರು ಜನರು ಲಡಾಖ್ಗೆ ಹೆಚ್ಚಿನ ಸ್ವಾಯತ್ತತೆಗಾಗಿ ನಡೆಸಿದ ಪ್ರತಿಭಟನೆಗಳಿಗೆ ಈ ಪ್ರದೇಶವು ಸಾಕ್ಷಿಯಾಗಿದೆ. ಇದೇ ಪ್ಯಾಂಗಾಂಗ್ ಸರೋವರದ ದಡದಲ್ಲಿ ಮೇ 2020ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಭೀಕರ ಘರ್ಷಣೆ ನಡೆದಿದ್ದು, ಮಿಲಿಟರಿ ಬಿಕ್ಕಟ್ಟು ಸೃಷ್ಟಿಯಾಗಿತ್ತು.