ಲಡಾಖ್: ಅಕಾಲಿಕ ಹಿಮಪಾತ, ಭಾರೀ ಮಳೆ ರೆಡ್ ಅಲರ್ಟ್ ಘೋಷಿಸಿದ ಐಎಂಡಿ
Photo: PTI
ಲೇಹ್: ಲಡಾಖ್ ನ ವಿವಿಧ ಭಾಗದಲ್ಲಿ ಅಕಾಲಿಕ ಹಿಮಪಾತ ಹಾಗೂ ಭಾರೀ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ ಹವಾಮಾನ ಇಲಾಖೆ ಈ ವಲಯದಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಭಾರೀ ಮಳೆಯಿಂದಾಗಿ ಲಮಯುರುನಲ್ಲಿರುವ ಲೇಹ್-ಕಾರ್ಗಿಲ್-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ದಿನಗಳ ಮಳೆಯ ನಂತರ ಲೇಹ್ ಹಾಗೂ ಕಾರ್ಗಿಲ್ ಜಿಲ್ಲೆಗಳಲ್ಲಿರುವ ಎತ್ತರದ ಪ್ರದೇಶಗಳಲ್ಲಿ ರಾತ್ರೋರಾತ್ರಿ ಅಕಾಲಿಕ ಹಿಮಪಾತ ಸಂಭವಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಗಿಲ್ನಲ್ಲಿರುವ ರಂಗ್ದೂಮ್ ಗ್ರಾಮ ಸುಮಾರು ಮೂರು ಇಂಚುಗಳ ಹಿಮಪಾತಕ್ಕೆ ಸಾಕ್ಷಿಯಾಗಿದೆ. ಪೆನ್ಸಿ ಲಾ, ಝಂಕ್ಸರ್ ಹಾಗೂ ಕಾರ್ಗಿಲ್ನ ಸುತ್ತವರಿದಿರುವ ಬೆಟ್ಟಗಳು ಸೇರಿದಂತೆ ಇತರ ಪ್ರದೇಶಗಳು ಹಿಮಾಚ್ಛಾದಿತವಾಗಿವೆ ಎಂದು ಅವರು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಗಿಲ್-ಝಂಕ್ಸರ್ ರಸ್ತೆಯಲ್ಲಿ ವಾಹನ ಸಂಚಾರ ರದ್ದುಗೊಳಿಸಲಾಗಿದೆ. ಲಮಯುರುನಲ್ಲಿ ಭೂಕುಸಿತ ಸಂಭವಿಸಿದ ಬಳಿಕ ಪ್ರಧಾನ ಲೇಹ್-ಕಾರ್ಗಿಲ್ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ವಾಹನ ಸಂಚಾರ ಮರು ಆರಂಭಿಸಲು ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಜಾಗರೂಕರಾಗಿರುವಂತೆ ಹಾಗೂ ಭೂಕುಸಿತ ಸಂಭವಿಸುವ ಸ್ಥಳದಿಂದ ದೂರ ಇರುವಂತೆ ಹವಾಮಾನ ಇಲಾಖೆ ಜನರಿಗೆ ಎಚ್ಚರಿಕೆ ನೀಡಿದೆ.