ದ್ವೀಪರಾಷ್ಟ್ರ ವನವಾಟು ಪೌರತ್ವವನ್ನು ಪಡೆದ ಲಲಿತ್ ಮೋದಿ ; ಐಪಿಎಲ್ ಹಗರಣದ ಆರೋಪಿಯನ್ನು ಕರೆತರುವ ಭಾರತದ ಪ್ರಯತ್ನಕ್ಕೆ ಹೊಸ ವಿಘ್ನ

ಲಲಿತ್ ಮೋದಿ | PC : PTI
ಹೊಸದಿಲ್ಲಿ: ಐಪಿಎಲ್ನ ಮಾಜಿ ಅಧ್ಯಕ್ಷ ಹಾಗೂ ಬಹುಕೋಟಿ ವಂಚನೆ ಹಗರಣದ ಆರೋಪಿ ಲಲಿತ್ ಮೋದಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪೆಸಿಫಿಕ್ ಸಾಗರದ ಪುಟ್ಟ ದ್ವೀಪರಾಷ್ಟ್ರವಾದ ವನುವಾಟುವಿನ ಪೌರತ್ವವನ್ನು ಅವರು ಪಡೆದುಕೊಂಡಿದ್ದಾರೆ. ಭಾರತೀಯ ವಿದೇಶಾಂಗ ಇಲಾಖೆಯು ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆಸಿದ ತನ್ನ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ದೃಢಪಡಿಸಿದೆ.
ಕಪ್ಪುಹಣ ಬಿಳುಪು ಹಾಗೂ ತೆರಿಗೆ ವಂಚನೆಯ ಆರೋಪಗಳನ್ನು ಎದುರಿಸುತ್ತಿರುವ ಲಲಿತ್ ಮೋದಿ ಅವರು ತನ್ನ ಭಾರತೀಯ ಪಾಸ್ಪೋರ್ಟ್ ಅನ್ನು ತ್ಯಜಿಸಲು ಲಂಡನ್ನಲ್ಲಿರುವ ಭಾರತೀಯ ಹೈಕಮೀಶನ್ಗೆ ಅರ್ಜಿಯನ್ನು ಸಲ್ಲಿಸಿದ್ದಾರೆಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ತನ್ನ ಪಾಸ್ಪೋರ್ಟ್ ಒಪ್ಪಿಸಲು ಲಲಿತ್ ಮೋದಿ ಅವರು ಲಂಡನ್ನಲ್ಲಿರುವ ಭಾರತೀಯ ಹೈಕಮೀಶನ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಚಾಲ್ತಿಯಲ್ಲಿರುವ ಕಾನೂನು ಹಾಗೂ ನಿಯಮಾವಳಿಗಳ ಹಿನ್ನೆಲೆಯಲ್ಲಿ ಈ ಅರ್ಜಿಯ ಪರಿಶೀಲನೆ ನಡೆಯಲಿದೆ. ಲಲಿತ್ ಮೋದಿ ಅವರು ವನವಾಟುವಿನ ಪೌರತ್ವವನ್ನು ಪಡೆದುಕೊಂಡಿರುವುದಾಗಿಯೂ ತಿಳಿದುಬಂದಿದೆ. ಅವರ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ಕಾನೂನುಪ್ರಕಾರ ಮುಂದುವರಿಸಿಕೊಂಡು ಹೋಗಲಿದ್ದೇವೆ ಜೈಸ್ವಾಲ್ ತಿಳಿಸಿದ್ದಾರೆ.
ಐಪಿಎಲ್ ವಂಚನೆ ಹಗರಣದಲ್ಲಿ ಆರೋಪಿಯಾಗಿದ್ದು, ಲಂಡನ್ಗೆ ಪರಾರಿಯಾಗಿರುವ ಲಲಿತ್ ಮೋದಿ ಅವರನ್ನು ಗಡಿಪಾರು ಮಾಡುವಂತೆ ಕೋರಿ ಸಲ್ಲಿಸಿದ ಮನವಿಯು ಹೆಚ್ಚಿನ ಪ್ರಗತಿಯನ್ನು ಸಾಧಿಸಿಲ್ಲ.
ಇದೀಗ ಕೇಂದ್ರಾಡಳಿತ ಪ್ರದೇ ಪಾಂಡಿಚೇರಿಗಿಂತಲೂ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ವನವಾಟುವಿನ ಪೌರತ್ವವನ್ನು ಲಲಿತ್ ಮೋದಿ ಪಡೆದದಿರುವುದು ಪ್ರಕರಣಕ್ಕೆ ಹೊಸ ತಿರುವನ್ನು ನೀಡಿದೆ.