ಬಿಹಾರ | ನಿತೀಶ್ ಕುಮಾರ್ ʼಮಹಿಳೆಯರನ್ನು ದಿಟ್ಟಿಸಿ ನೋಡಲೆಂದೇʼ ಯಾತ್ರೆ ಮಾಡುತ್ತಿದ್ದಾರೆ : ವಿವಾದ ಸೃಷ್ಟಿಸಿದ ಲಾಲೂ ಪ್ರಸಾದ್ ಹೇಳಿಕೆ

PC | PTI
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಮ್ಮಿಕೊಂಡಿರುವ ಮಹಿಳಾ ಸಂವಾದ ಯಾತ್ರೆಯನ್ನು, "ನಿತೀಶ್ ಮಹಿಳೆಯರತ್ತ ಕುಡಿನೋಟʼ ಬೀರಲು ಕೈಗೊಳ್ಳುತ್ತಿರುವ ಯಾತ್ರೆ" ಎಂದು ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅಣಕಿಸಿರುವುದು ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಸುದ್ದಿಗಾರರ ಜತೆ ಮಾತನಾಡಿದ ಲಾಲೂ ನಿತೀಶ್ ಯಾತ್ರೆಯನ್ನು "ನಯನ್ ಸೇಕ್ನೆ ಜಾ ರಹೇ ಹೈ" (ಮಹಿಳೆಯರನ್ನು ದಿಟ್ಟಿಸಲು ಯಾತ್ರೆ ಮಾಡುತ್ತಿದ್ದಾರೆ) ಎಂದು ಬಣ್ಣಿಸಿದರು. ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ ಲಾಲೂ, "ಇದು ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆ; ಬಾಯ್ತಪ್ಪಿನಿಂದ ನೀಡಿದ ಹೇಳಿಕೆಯಲ್ಲ" ಎಂದು ಸ್ಪಷ್ಟಪಡಿಸಿದ್ದರು.
ಎನ್ ಡಿಎ ಮುಖಂಡರು ಲಾಲೂ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ. ಇದು ಮಹಿಳೆಯರಿಗೆ ಮತ್ತು ಮಹಿಳಾ ಸಬಲೀಕರಣದ ಪ್ರಯತ್ನಗಳಿಗೆ ಮಾಡಿದ ಅವಮಾನ ಎಂದು ಹಲವು ಮಂದಿ ಆಪಾದಿಸಿದ್ದಾರೆ.
ನಿತೀಶ್ ಅವರ ಸಂಯುಕ್ತ ಜನತಾದಳ ಈ ಹೇಳಿಕೆಯನ್ನು ಖಂಡಿಸಿ, ಕ್ಷಮೆಯಾಚನೆಗೆ ಪಟ್ಟು ಹಿಡಿದಿದೆ. "ಇದನ್ನು ಎಷ್ಟು ಖಂಡಿಸಿದರೂ ಸಾಲದು" ಎಂದು ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಹೇಳಿದ್ದಾರೆ. ಇದು ಅಗೌರವ ಪ್ರವೃತ್ತಿಯ ದ್ಯೋತಕ ಎಂದು ಅವರು ಬಣ್ಣಿಸಿದ್ದಾರೆ.
ಜೆಡಿಯು ಮಿತ್ರಪಕ್ಷ ಬಿಜೆಪಿಯ ಉಪಮುಖ್ಯಮಂತ್ರಿ ಸಮರ್ಥ್ ಚೌಧರಿ, ಲಾಲೂ ಅವರ ಹೇಳಿಕೆ ದುರದೃಷ್ಟಕರ; ಲಾಲೂ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಳಕಳಿ ಇದೆ ಎಂದು ಅವರು ಲೇವಡಿ ಮಾಡಿದ್ದಾರೆ. ಈ ಹೇಳಿಕೆ ಅವರ ಕೀಳು ಅಭಿರುಚಿಯನ್ನು ಬಿಂಬಿಸುತ್ತದೆ ಎಂದು ಟೀಕಿಸಿದ್ದಾರೆ. ಮತ್ತೊಬ್ಬ ಡಿಸಿಎಂ ವಿಜಯ್ ಕುಮಾರ್ ಸಿನ್ಹಾ ಕೂಡಾ, ಇದು ಬಿಹಾರಕ್ಕೆ ಮಾಡಿದ ಅವಮಾನ ಎಂದು ವಿಶ್ಲೇಷಿಸಿದ್ದಾರೆ.