ನೌಕರಿಗಾಗಿ ಜಮೀನು ಪ್ರಕರಣ ; ಈಡಿ ಯಿಂದ ಲಾಲು ಪ್ರಸಾದ್ ಯಾದವ್ ವಿಚಾರಣೆ
ಲಾಲು ಪ್ರಸಾದ್ ಯಾದವ್ | Photo: PTI
ಹೊಸದಿಲ್ಲಿ : ನೌಕರಿಗಾಗಿ ಜಮೀನು ಪ್ರಕರಣಕ್ಕೆ ಸಂಬಂಧಿಸಿ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಜಾರಿ ನಿರ್ದೇಶನಾಲಯ (ಈಡಿ) ಪಾಟ್ನಾದಲ್ಲಿ ಸೋಮವಾರ ವಿಚಾರಣೆ ನಡೆಸಿದೆ.
ಲಾಲು ಪ್ರಸಾದ್ ಯಾದವ್ ಅವರು ಪುತ್ರಿ ಹಾಗೂ ಪ್ರಕರಣದ ಇನ್ನೋರ್ವ ಆರೋಪಿ ಮಿಶಾ ಭಾರತಿ ಅವರೊಂದಿಗೆ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿ ವಿಚಾರಣೆಯಲ್ಲಿ ಪಾಲ್ಗೊಂಡರು.
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಆರ್ ಜೆ ಡಿಯೊಂದಿಗೆ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಮೈತ್ರಿ ಕಡಿದುಕೊಂಡ ದಿನದ ಬಳಿಕ ಈಡಿ ಅವರನ್ನು ವಿಚಾರಣೆಗೆ ಒಳಪಡಿಸಿದೆ.
2004 ಹಾಗೂ 2009ರ ನಡುವೆ ಕೇಂದ್ರದ ರೈಲ್ವೆ ಸಚಿವರಾಗಿದ್ದಾಗ ಲಾಲು ಪ್ರಸಾದ್ ಯಾದವ್ ಅವರು ನೌಕರಿಗಾಗಿ ಉದ್ಯೋಗಾಕಾಂಕ್ಷಿಗಳಿಂದ ನಿವೇಶನ ಪಡೆದುಕೊಳ್ಳುವ ಮೂಲಕ ನೇಮಕಾತಿ ಕಾರ್ಯ ವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದು ಈಡಿ ಆರೋಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ ಹಾಗೂ ಹೇಮಾ ಯಾದವ್ ಸೇರಿದಂತೆ ಇಬ್ಬರು ಪುತ್ರಿಯರು ಆರೋಪಿಗಳು ಎಂದು ಉಲ್ಲೇಖಿಸಿ ಈಡಿ ದಿಲ್ಲಿಯ ವಿಶೇಷ ಪಿಎಂಎಲ್ಎ ನ್ಯಾಯಾಲಯಕ್ಕೆ ಜನವರಿ 9 ರಂದು ಆರೋಪ ಪಟ್ಟಿ ಸಲ್ಲಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿ ನವೆಂಬರ್ನಲ್ಲಿ ಬಂಧಿತರಾಗಿದ್ದ ಕುಟುಂಬದ ಆಪ್ತ ಅಮಿತ್ ಕಟ್ಯಾಲ್ ಸೇರಿದಂತೆ ಹಲವರ ಹೆಸರುಗಳನ್ನು ಆರೋಪ ಪಟ್ಟಿ ಒಳಗೊಂಡಿತ್ತು.