ಭೂಹಗರಣ ತನಿಖೆ : ಜಾರ್ಖಂಡ್ ಸಿಎಂ ವಿಚಾರಣೆ ವೇಳೆ ತನಿಖಾಧಿಕಾರಿಗಳಿಗೆ ರಕ್ಷಣೆ ಕೋರಿ ಈಡಿಯಿಂದ ಸಿಎಸ್, ಡಿಜಿಪಿಗೆ ಪತ್ರ
ಹೇಮಂತ್ ಸೊರೇನ್ | Photo: PTI
ಹೊಸದಿಲ್ಲಿ : ಭೂಹಗರಣಕ್ಕೆ ಸಂಬಂಧಿಸಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ತನಿಖೆ ನಡೆಸುತ್ತಿರುವ ತನ್ನ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕೆಂದು ಕೋರಿ ಜಾರಿ ನಿರ್ದೇಶನಾಲಯ (ಈಡಿ)ವು ಮುಖ್ಯ ಕಾರ್ಯದರ್ಶಿ (ಸಿಎಸ್) ಹಾಗೂ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)ರಿಗೆ ಶುಕ್ರವಾರ ಪತ್ರ ಬರೆದಿದೆ.
ಹೇಮಂತ್ ಸೊರೇನ್ ವಿರುದ್ಧ ಜಾರಿ ನಿರ್ದೇಶನಾಲಯ(ಈಡಿ)ವು ಮನ್ಸ್ ಜಾರಿಗೊಳಿಸಿರುವ ಬಗ್ಗೆ ರಾಜ್ಯದಲ್ಲಿ ಭಾರೀ ಜನಾಕ್ರೋಶವುಂಟಾಗಿದ್ದು, ಅದು ಯಾವುದೇ ಕ್ಷಣಕ್ಕೂ ಕೆಟ್ಟ ತಿರುವನ್ನು ಪಡೆಯಬಹುದೆಂದು ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಎಚ್ಚರಿಕೆ ನೀಡಿದ ಬೆನ್ನಲ್ಲೇ ತನಿಖಾ ಏಜೆನ್ಸಿ ಈ ಪತ್ರವನ್ನು ಬರೆದಿದೆ.
ಭೂಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ವಿಚಾರಣೆಯ ಸಂದರ್ಭದಲ್ಲಿ ತಲೆದೋರಬಹುದಾದ ಕಾನೂನು, ಸುವ್ಯವಸ್ಥೆಯ ಸಮಸ್ಯೆಗಳನ್ನು ನಿಭಾಯಿಸಲು ಈ ಪತ್ರವನ್ನು ಬರೆಯಲಾಗಿದೆಯೆಂದು ಈಡಿ ಮೂಲಗಳು ತಿಳಿಸಿವೆ.
ಭೂಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಸೊರೇನ್ ಅವರಿಗೆ ಎಂಟನೇ ಬಾರಿಗೆ ಸಮನ್ಸ್ ಜಾರಿಗೊಳಿಸಿದ ಬಳಿಕ ಅವರು ವಿಚಾರಣೆಗೆ ಹಾಜರಾಗಲು ಒಪ್ಪಿಕೊಂಡಿದ್ದರು. ಶನಿವಾರ ಮಧ್ಯಾಹ್ನ ಸೊರೇನ್ ರನ್ನು ರಾಂಚಿಯಲ್ಲಿರುವ ಅವರ ನಿವಾಸದಲ್ಲಿ ಈಡಿ ಅಧಿಕಾರಿಗಳು ಪ್ರಶ್ನಿಸುವ ನಿರೀಕ್ಷೆಯಿದೆ.
ತನ್ನ ಅಧಿಕಾರಿಗಳಿಗೆ ರಕ್ಷಣೆ ಕೋರಿ ಜಾರಿ ನಿರ್ದೇಶನಾಲಯವು ಶುಕ್ರವಾರ ಬರೆದ ಪತ್ರವನ್ನು ರಾಂಚಿಯ ಹಿರಿಯ ಪೊಲೀಸ್ ಅಧೀಕ್ಷಕರಿಗೆ ಕಳುಹಿಸಲಾಗಿದೆ. ರಾಂಚಿಯಲ್ಲಿರುವ ಮುಖ್ಯಮಂತ್ರಿಯವರ ನಿವಾಸದ ಹೊರಗೆ ಹಾಗೂ ರಾಂಚಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯ ಹೊರಗೂ ಬಲವಾದ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆಯೆಂದು ರಾಂಚಿ ಪೊಲೀಸರು ತಿಳಿಇದ್ದಾರೆ.
ಜಾರ್ಖಂಡ್ ಮುಕ್ತಿ ಮೋಚಾ (ಜೆಎಂಎಂ) ಪಕ್ಷವು ಬುಧವಾರ ಹೇಳಿಕೆಯೊಂದನ್ನು ನೀಡಿ, ತನ್ನ ನಾಯಕರು ಹಾಗೂ ರಾಜ್ಯ ಸರಕಾರದ ಅಧಿಕಾರಿಗಳ ವಿರುದ್ಧ ಈಡಿ ರಾಜಕೀಯ ಪ್ರೇರಿತ ಕ್ರಮದ ಬಗ್ಗೆ ಜನತೆಯಲ್ಲಿ ಭಾರೀ ಅಸಮಾಧಾನವುಂಟಾಗಿದೆ ಎಂದು ಹೇಳಿತ್ತು. ಕೇಂದ್ರೀಯ ಏಜೆನ್ಸಿಯು ರಾಜಕೀಯ ಪಕ್ಷವೊಂದರ ಕೈಗೊಂಬೆಯಾಗುವ ಬದಲು, ಪೂರ್ಣ ಪಾರದರ್ಶಕತೆಯೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದೆ.
ಜಾರಿ ನಿರ್ದೇಶನಾಲಯದ ವಿರುದ್ಧ ಜಾರ್ಖಂಡ್ ನ ಜನತೆಯ ಆಕ್ರೋಶವು ಕೆಟ್ಟ ತಿರುವನ್ನು ಪಡೆಯಬಹುದೆಂದು ಜೆಎಂಎಂನ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ಸುಪ್ರಿಯೊ ಭಟ್ಟಾಚಾರ್ಯ ಎಚ್ಚರಿಕೆ ನೀಡಿದ್ದರು.