ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ: ಬಂಡೆಗಳು ಬಿದ್ದು ಹೈದರಾಬಾದ್ ನ ಇಬ್ಬರು ಪ್ರವಾಸಿಗಳ ಮೃತ್ಯು
PC : PTI
ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಶನಿವಾರ ಭೂಕುಸಿತ ಸಂಭವಿಸಿದ್ದು, ಬಂಡೆಗಳು ಬಡಿದು ಹೈದರಾಬಾದ್ ನ ಇಬ್ಬರು ಪ್ರವಾಸಿಗಳು ಮೃತಪಟ್ಟಿದ್ದಾರೆ. ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೌಚಾರ್ ಮತ್ತು ಕರ್ಣಪ್ರಯಾಗ ನಡುವೆ ಛಟ್ವಾಪೀಪಲ್ ಬಳಿ ಈ ದುರ್ಘಟನೆ ಸಂಭವಿಸಿದೆ ಎಂದು ಪೋಲಿಸರು ತಿಳಿಸಿದರು.
ನಿರ್ಮಲ್ ಶಾಹಿ(36) ಮತ್ತು ಸತ್ಯನಾರಾಯಣ(50) ಅವರು ಬೈಕ್ ನಲ್ಲಿ ದೇವಸ್ಥಾನದಿಂದ ಮರಳುತ್ತಿದ್ದಾಗ ಗುಡ್ಡದ ಮೇಲಿನಿಂದ ಉರುಳಿದ ಬಂಡೆಗಳು ಅವರಿಗೆ ಬಡಿದಿದ್ದವು. ಭೂಕುಸಿತದ ಅವಶೇಷಗಳಿಂದ ಅವರಿಬ್ಬರ ಶವಗಳನ್ನು ಹೊರತೆಗೆಯಲಾಗಿದೆ ಎಂದರು.
ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಿಂದಾಗಿ ಭೂಕುಸಿತಗಳು ಸಂಭವಿಸುತ್ತಿದ್ದು,ಬದರಿನಾಥ ಹೆದ್ದಾರಿಯಲ್ಲಿ ಆರಕ್ಕೂ ಹೆಚ್ಚು ಸ್ಥಳಗಳಲ್ಲಿ ಸಂಚಾರಕ್ಕೆ ತಡೆಯುಂಟಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಮತ್ತು ಗಡಿ ರಸ್ತೆಗಳ ಸಂಸ್ಥೆಯ ಸಿಬ್ಬಂದಿಗಳು ರಸ್ತೆಗಳನ್ನು ತೆರವುಗೊಳಿಸುತ್ತಿದ್ದಾರೆ
ರುದ್ರಪ್ರಯಾಗ-ಕೇದಾರನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಭೂಕುಸಿತದಿಂದಾಗಿ ಸಂಚಾರಕ್ಕೆ ತಡೆಯುಂಟಾಗಿದೆ.
ಹವಾಮಾನ ಇಲಾಖೆಯು ಕುಮಾಂವ್ ಮತ್ತು ಗಢ್ವಾಲ್ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು,ಜಲಮೂಲಗಳ ಬಳಿ ಹೋಗದಂತೆ ಜನರಿಗೆ ಸೂಚಿಸಿದೆ.