ಭೂಕುಸಿತ | ಇದುವರೆಗೆ ಪತ್ತೆಯಾಗದ ಲಾರಿ ಚಾಲಕ ; ಸಾಮಾಜಿಕ ಮಾಧ್ಯಮದಲ್ಲಿ ಸಿದ್ದರಾಮಯ್ಯಗೆ ಕೇರಳೀಯರಿಂದ ಘೆರಾವೊ
ಮುಖ್ಯಮಂತ್ರಿ ಸಿದ್ದರಾಮಯ್ಯ, ಅರ್ಜುನ್
ಕೋಝಿಕ್ಕೋಡ್ : ಉತ್ತರಕನ್ನಡದಲ್ಲಿ ಜುಲೈ 16ರಂದು ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾದ ಲಾರಿ ಚಾಲಕ ಅರ್ಜುನ್ ಮೂಲಾಡಿಕುಝಿಯಿಲ್ ಅವರನ್ನು ರಕ್ಷಿಸುವಲ್ಲಿ ವಿಳಂಬವಾಗುತ್ತಿರುವ ಕುರಿತಂತೆ ಕೇರಳೀಯರು ಸಾಮಾಜಿಕ ಮಾಧ್ಯಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಘೆರಾವೊ ಹಾಕಿದ್ದಾರೆ.
ಸಿದ್ದರಾಮಯ್ಯ ಅವರು ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿರುವ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು. ಅದರೊಂದಿಗೆ ಫೋಟೊಗಳನ್ನು ಕೂಡ ಹಾಕಿದ್ದರು. ಅದರ ಕೆಳಗೆ ಕೇರಳೀಯರು ‘ಸೇವ್ ಅರ್ಜುನ್’ ಹಾಗೂ ‘ಶೇಮ್ ಕರ್ನಾಟಕ ಗವರ್ನಮೆಂಟ್’ ಪೋಸ್ಟ್ ಅನ್ನು ಹಾಕಿದ್ದಾರೆ. ಆರು ದಿನಗಳ ಶೋಧ ಕಾರ್ಯಾಚರಣೆ ಬಳಿಕವೂ ಟ್ರಕ್ ಚಾಲಕ ಅರ್ಜುನ್ನನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಇರುವ ಕರ್ನಾಟಕ ಸರಕಾರದ ಅಸಮರ್ಥತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲಾನ್ ಮಸ್ಕ್ಗೆ ಟ್ಯಾಗ್ ಮಾಡಲಾದ ‘ಎಕ್ಸ್’ನ ಒಂದು ಪೋಸ್ಟ್ನಲ್ಲಿ ಅವರ ಮಧ್ಯಪ್ರವೇಶಕ್ಕೆ ಆಗ್ರಹಿಸಲಾಗಿದೆ. ‘‘ಬಿಕ್ಕಟ್ಟನ್ನು ಎತ್ತಿ ತೋರಿಸುವಲ್ಲಿ ಹಾಗೂ ಪರಿಹಾರ ನೀಡುವಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಪರಿಣಾಮ ಬೀರುತ್ತದೆ. ಈ ವಿಷಯದಲ್ಲಿ ಗಮನ ಸೆಳೆಯುವಲ್ಲಿ ಹಾಗೂ ಈ ತುರ್ತು ಪರಿಸ್ಥಿತಿಯಲ್ಲಿ ಕ್ರಮ ಜರುಗಿಸುವಲ್ಲಿ ನೀವು ನೆರವು ನೀಡಬಹುದು ಎಂದು ಎಂದು ನಾವು ನಿರೀಕ್ಷಿಸುತ್ತೇವೆ’’ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿರುವುದರ ವಿರುದ್ಧ ಜನಕೀಯ ಕೂಟಾಯಂ ಅಡಿಯಲ್ಲಿ ಕನ್ನಡಿಕ್ಕಲ್ ಪ್ರದೇಶದ ಜನರು ಶನಿವಾರ ರಾತ್ರಿ ಹಾಗೂ ರವಿವಾರ ಬೆಳಗ್ಗೆ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ. ಆದರೆ, ಅರ್ಜುನ್ನ ನೆರೆ ಮನೆಯ ಆಸಿಫ್ ಅಜೀಝ್, ಪೇಸ್ಬುಕ್ನಲ್ಲಿ ಸಿದ್ದರಾಮಯ್ಯ ಅವರ ಕುರಿತ ಪೋಸ್ಟ್ ಅಭಿಯಾನವನ್ನು ಕೂಟ್ಟಾಯ್ಮ ಆರಂಭಿಸಿಲ್ಲ ಎಂದಿದ್ದಾರೆ.
‘‘ಆದರೆ, ಆ ಪೋಸ್ಟ್ಗಳಲ್ಲಿ ಅಭಿವ್ಯಕ್ತಿಸಿದ ಹೇಳಿಕೆಯನ್ನು ನಾವು ಹಂಚಿಕೊಂಡಿದ್ದೇವೆ.’’ ಎಂದು ಅವರು ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದ ಬಳಿಕ ಶನಿವಾರ ರಾತ್ರಿ 8.30ಕ್ಕೆ ಕನ್ನಡಿಕ್ಕಲ್ನಲ್ಲಿ ನಾವು ಸುಮಾರು 200 ಮಂದಿ ಸೇರಿ ಪ್ರತಿಭಟನೆ ನಡೆಸಿದ್ದೇವೆ. ವ್ಯಾಟ್ಸ್ ಆ್ಯಪ್ ಗುಂಪು ಈ ಪ್ರತಿಭಟನೆ ಆಯೋಜಿಸಿತ್ತು ಎಂದು ಅವರು ಹೇಳಿದ್ದಾರೆ.
ಈ ನಡುವೆ ಸಿದ್ದರಾಮಯ್ಯ ಅವರು ಫೇಸ್ಬುಕ್ ಪೋಸ್ಟ್ನಲ್ಲಿ ಶೋಧ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಈ ದುರ್ಘಟನೆಗೆ ಅವೈಜ್ಞಾನಿಕ ನಿರ್ಮಾಣ ಕಾರಣವೆಂದು ಪತ್ತೆಯಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.