ಯಾವುದೇ ರಾಜ್ಯದ ಮೇಲೆ ಭಾಷೆಯನ್ನು ಹೇರಲಾಗುವುದಿಲ್ಲ: ಕೇಂದ್ರ

Photo Credit | PTI
ಹೊಸದಿಲ್ಲಿ: ಯಾವುದೇ ರಾಜ್ಯದ ಮೇಲೆ ಯಾವುದೇ ಭಾಷೆಯನ್ನು ಹೇರಲಾಗುವುದಿಲ್ಲ ಎಂದು ಕೇಂದ್ರ ಸರಕಾರವು ಬುಧವಾರ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದೆ.
ಸಿಪಿಎಂ ನಾಯಕ ಡಾ.ಜಾನ್ ಬ್ರಿಟ್ಟಾಸ್ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಹಾಯಕ ಶಿಕ್ಷಣ ಸಚಿವ ಡಾ.ಸುಕಾಂತ ಮಜುಮ್ದಾರ್ ಅವರು, 2020ರ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಯು ಇತರ ವಿಷಯಗಳ ಜೊತೆಗೆ ಪ್ಯಾರಾ 4.13ರಲ್ಲಿ ಸಾಂವಿಧಾನಿಕ ನಿಬಂಧನೆಗಳು, ಜನರು, ಪ್ರದೇಶಗಳು ಮತ್ತು ಒಕ್ಕೂಟದ ಆಕಾಂಕ್ಷೆಗಳು ಹಾಗೂ ಬಹುಭಾಷಾವಾದ ಮತ್ತು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ತ್ರಿಭಾಷಾ ಸೂತ್ರದ ಅನುಷ್ಠಾನವನ್ನು ಮುಂದುವರಿಸಲಾಗುವುದು ಎಂದು ಹೇಳಲಾಗಿದೆ ಎಂದು ತಿಳಿಸಿದರು. ಆದರೂ, ತ್ರಿಭಾಷಾ ಸೂತ್ರದಲ್ಲಿ ವ್ಯಾಪಕ ಹೊಂದಾಣಿಕೆಗೆ ಅವಕಾಶವಿದೆ ಮತ್ತು ಯಾವುದೇ ರಾಜ್ಯದ ಮೇಲೆ ಯಾವುದೇ ಭಾಷೆಯನ್ನು ಹೇರಲಾಗುವುದಿಲ್ಲ ಎಂದು ಅವರು ಹೇಳಿದರು.
ಮಕ್ಕಳು ಕಲಿಯುವ ಮೂರು ಭಾಷೆಗಳು ರಾಜ್ಯಗಳ, ಪ್ರದೇಶಗಳ ಮತ್ತು ಸಹಜವಾಗಿಯೇ ವಿದ್ಯಾರ್ಥಿಗಳ ಆಯ್ಕೆಗಳಾಗಿರುತ್ತವೆ. ಈ ಪೈಕಿ ಕನಿಷ್ಠ ಎರಡು ಭಾರತೀಯ ಭಾಷೆಗಳಾಗಿರಬೇಕು ಎಂದು ಅವರು ತಿಳಿಸಿದರು.
ಎನ್ಇಪಿ 2020ರಡಿ ಹಿಂದಿ ಹೇರಿಕೆಯ ವಿರುದ್ಧ ತಮಿಳುನಾಡಿನಲ್ಲಿ ವ್ಯಕ್ತವಾಗಿರುವ ಕಳವಳಗಳು ಮತ್ತು ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಸರಕಾರಕ್ಕೆ ತಿಳಿದಿದೆಯೇ ಎಂದು ಬ್ರಿಟ್ಟಾಸ್ ಪ್ರಶ್ನಿಸಿದ್ದರು.
ವಿಶೇಷವಾಗಿ ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ಮೂರು ಭಾಷೆಗಳ ಪೈಕಿ ಒಂದು ಅಥವಾ ಹೆಚ್ಚಿನ ಭಾಷೆಯನ್ನು ಬದಲಿಸಲು ಬಯಸಿದರೆ ಮತ್ತು ಮೂರು ಭಾಷೆಗಳಲ್ಲಿ (ಸಾಹಿತ್ಯಮಟ್ಟದಲ್ಲಿ ಒಂದು ಭಾರತೀಯ ಭಾಷೆ ಸೇರಿದಂತೆ)ಮೂಲಭೂತ ಪ್ರಾವೀಣ್ಯವನ್ನು ಸಾಧಿಸಿದ್ದರೆ ಆರು ಅಥವಾ ಏಳನೇ ತರಗತಿಯಲ್ಲಿ ಅವರು ಹಾಗೆ ಮಾಡಬಹುದು ಎಂದು ಮಜುಮ್ದಾರ್ ತಿಳಿಸಿದರು.
ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡಬಯಸುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಎನ್ಇಪಿ 2020 ಅವಕಾಶವನ್ನು ನೀಡುತ್ತದೆ, ಆದರೆ ಕನಿಷ್ಠ ಎರಡು ಭಾರತೀಯ ಭಾಷೆಗಳಾಗಿರಬೇಕು ಎಂದರು.
‘ಮಕ್ಕಳು 2ರಿಂದ 8ರ ನಡುವಿನ ವಯಸ್ಸಿನಲ್ಲಿ ಭಾಷೆಗಳನ್ನು ಬಹುಬೇಗನೆ ಕಲಿಯುತ್ತಾರೆ ಮತ್ತು ಬಹುಭಾಷೆಗಳ ಕಲಿಕೆಯು ಯುವವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವಿನ ಲಾಭಗಳನ್ನು ಒದಗಿಸುತ್ತದೆ ಎನ್ನುವುದನ್ನು ಸಂಶೋಧನೆಯು ಸ್ಪಷ್ಟವಾಗಿ ತೋರಿಸಿದೆ. ಬುನಾದಿ ಹಂತದಿಂದಲೇ ಮಕ್ಕಳು ವಿವಿಧ ಭಾಷೆಗಳಿಗೆ (ಆದರೆ ಮಾತೃಭಾಷೆಗೆ ವಿಶೇಷ ಒತ್ತಿನೊಂದಿಗೆ) ಒಡ್ಡಿಕೊಳ್ಳುತ್ತಾರೆ’ ಎಂದು ಸಚಿವರು ಎನ್ಇಪಿ 2020ರ ಪ್ಯಾರಾ 4.12ನ್ನು ಉಲ್ಲೇಖಿಸಿ ಹೇಳಿದರು.
ಎಲ್ಲ ಭಾಷೆಗಳನ್ನು ಸುಲಭ ಮತ್ತು ಸಂವಾದ ಶೈಲಿಯಲ್ಲಿ ಬೋಧಿಸಲಾಗುವುದು. ಆರಂಭಿಕ ವರ್ಷಗಳಲ್ಲಿ ಮಾತೃಭಾಷೆಯಲ್ಲಿ ಓದಲು ಮತ್ತು ಬರೆಯಲು ಕಲಿಸಲಾಗುವುದು. ಮೂರನೇ ತರಗತಿ ಮತ್ತು ನಂತರ ಇತರ ಭಾಷೆಗಳಲ್ಲಿ ಓದುವ ಮತ್ತು ಬರೆಯುವ ಕೌಶಲ್ಯವನ್ನು ಅಭಿವೃದ್ಧಿಗೊಳಿಸಲಾಗುವುದು. ವಿವಿಧ ಭಾಷೆಗಳ ಬೋಧನೆ ಹಾಗೂ ಕಲಿಕೆಗಾಗಿ ಮತ್ತು ಅದನ್ನು ಜನಪ್ರಿಯಗೊಳಿಸಲು ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ ಮಜುಮ್ದಾರ್, ಎನ್ಇಪಿ 2020 ನೀತಿಯು ಮಾತೃಭಾಷೆಯಲ್ಲಿ ಅತ್ಯುತ್ತಮ ಗುಣಮಟ್ಟದ ಪಠ್ಯಪುಸ್ತಕಗಳನ್ನು ಲಭ್ಯವಾಗಿಸುತ್ತದೆ ಮತ್ತು ಶಿಕ್ಷಕರು ಬೋಧನೆ ಸಮಯದಲ್ಲಿ ದ್ವಿಭಾಷಾ ವಿಧಾನವನ್ನು ಬಳಸುವಂತೆ ಉತ್ತೇಜಿಸುತ್ತದೆ ಎಂದೂ ಹೇಳಿದರು