ಸುಂದರ್ ಪಿಚ್ಚೈ ಹೆಸರನ್ನು ಎಳೆದು ತಂದ ತಮಿಳುನಾಡು ಪಕ್ಷಗಳು: ಭಾಷಾ ವಿವಾದಕ್ಕೆ ಹೊಸ ತಿರುವು

ಗೂಗಲ್ ಸಿಇಒ ಸುಂದರ್ ಪಿಚ್ಚೈ | PTI
ಚೆನ್ನೈ: ತಮಿಳುನಾಡಿನ ರಾಜಕೀಯ ಪಕ್ಷಗಳು ಇದೀಗ ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರನ್ನು ತ್ರಿಭಾಷಾ ಸೂತ್ರ ವಿವಾದಕ್ಕೆ ಎಳೆದು ತಂದಿದ್ದು, ಅವರು ತಮ್ಮ ಶಾಲಾ ವ್ಯಾಸಂಗದ ದಿನಗಳಲ್ಲಿ ಹಿಂದಿ ಕಲಿತಿದ್ದರೆ ಎಂಬ ಕುರಿತು ಬಿಸಿಬಿಸಿ ಚರ್ಚೆಯಲ್ಲಿ ತೊಡಗಿವೆ.
ತಮಿಳುನಾಡಿನ ನಿವಾಸಿಯಾದ ಸುಂದರ್ ಪಿಚ್ಚೈ, ತಾವು ಐಐಟಿ ಖರಗ್ ಪುರ್ ನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುವುದಕ್ಕೂ ಮುನ್ನ, ಮದ್ರಾಸ್ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಆವರಣದೊಳಗಿರುವ ಜವಾಹರ್ ವಿದ್ಯಾಲಯ ಹಾಗೂ ವನವಾಣಿ ಮೆಟ್ರಿಕ್ಯುಲೇಶನ್ ಹಿರಿಯ ಪ್ರೌಢ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣ ಪೂರೈಸಿದ್ದರು.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಭಾಗವಾಗಿ ಉದ್ಭವಿಸಿರುವ ತ್ರಿಭಾಷಾ ಸೂತ್ರವನ್ನು ವಿರೋಧಿಸುತ್ತಿರುವವರು, ಕೇವಲ ತಮಿಳು ಮತ್ತು ಇಂಗ್ಲಿಷ್ ನಲ್ಲಿ ಕಲಿತ ಅಸಂಖ್ಯಾತ ತಮಿಳುನಾಡು ಇಂಜಿನಿಯರ್ ಗಳು ಹಾಗೂ ವೃತ್ತಿಪರರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ ಎಂಬುದನ್ನು ಉಲ್ಲೇಖಿಸಿ, ತಮ್ಮ ನಿಲುವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.
ಗೂಗಲ್ ಸಿಇಒ ಸುಂದರ್ ಪಿಚ್ಚೈ ತಮ್ಮ ವೃತ್ತಿ ಜೀವನದಲ್ಲಿ ಸಾಧಿಸಿರುವ ಯಶಸ್ಸಿಗೆ ಹಿಂದಿ ಕಲಿಯದಿರುವುದರಿಂದೇನಾದರೂ ಅಡ್ಡಿಯಾಯಿತೆ ಎಂದು ಬುಧವಾರ ತಮಿಳುನಾಡು ಮಾಹಿತಿ ತಂತ್ರಜ್ಞಾನ ಸಚಿವ ಪಿ.ಟಿ.ಆರ್. ಪಳನಿವೇಲ್ ಪ್ರಶ್ನಿಸುವ ಮೂಲಕ, ತಮ್ಮ ಮಾತೃ ಭಾಷೆ ತಮಿಳನ್ನು ನಿರರ್ಗಳವಾಗಿ ಮಾತನಾಡುವ ಸುಂದರ್ ಪಿಚ್ಚೈರನ್ನು ತ್ರಿಭಾಷಾ ಸೂತ್ರ ವಿವಾದಕ್ಕೆ ಎಳೆದು ತಂದಿದ್ದಾರೆ.
“ತ್ರಿಭಾಷಾ ಸೂತ್ರವು ವಿಫಲ ಮಾದರಿಯಾಗಿದ್ದು, ಅದನ್ನು ಯಶಸ್ವಿ ದ್ವಿಭಾಷಾ ಸೂತ್ರದ ಬದಲಿಗೆ ಜಾರಿಗೆ ತರಬೇಕಾದ ಅಗತ್ಯವಿಲ್ಲ. ಗೂಗಲ್ ನ ಮಾತೃ ಸಂಸ್ಥೆ ಆಲ್ಫಬೆಟ್ ನ ಸಿಇಒ ಸುಂದರ್ ಪಿಚ್ಚೈ ತಮಗೆ ಹಿಂದಿ ತಿಳಿದಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ, ಹಿಂದಿ ತಿಳಿಯದಿರುವುದರಿಂದ ಅವರ ವೃತ್ತಿ ಜೀವನಕ್ಕೇನಾದರೂ ತೊಡಕಾಗಿದೆಯೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಇದರ ಬೆನ್ನಿಗೇ, “ನಾನು ನನ್ನ ಶಾಲೆಯಲ್ಲಿ ಹಿಂದಿ ಕಲಿತಿದ್ದೆ” ಎಂದು ಸುಂದರ್ ಪಿಚ್ಚೈ ಹೇಳಿರುವ ದಿನಾಂಕರಹಿತ ವೀಡಿಯೊವೊಂದನ್ನು ಹಂಚಿಕೊಂಡಿರುವ ಬಿಜೆಪಿ ನಾಯಕರು ಹಾಗೂ ಬೆಂಬಲಿಗರು, 1980ರ ದಶಕದಲ್ಲೇ ರಾಜ್ಯದ ಖಾಸಗಿ ಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಜಾರಿಯಲ್ಲಿತ್ತು ಎಂದು ಡಿಎಂಕೆ ಸಚಿವ ಪಿ.ಟಿ.ಆರ್.ಪಳನಿವೇಲ್ ಗೆ ತಿರುಗೇಟು ನೀಡಿದ್ದಾರೆ.
ಕೆಲವು ಬಿಜೆಪಿ ಸಾಮಾಜಿಕ ಮಾಧ್ಯಿಮ ಖಾತೆಗಳು ಸುಂದರ್ ಪಿಚ್ಚೈ ಹಿಂದಿಯಲ್ಲಿ ಮಾತನಾಡುತ್ತಿರುವ ವೀಡಿಯೊವೊಂದನ್ನೂ ಪೋಸ್ಟ್ ಮಾಡಿವೆ. ಆದರೆ, ಅದು ತಿರುಚಿದ ವೀಡಿಯೊ ಎಂದು ತಮಿಳು ಸತ್ಯಶೋಧನಾ ವೆಬ್ ಸೈಟ್ You Turn ಹೇಳಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ, “ಪಿ.ಟಿ.ಆರ್.ಪಳನಿವೇಲ್ ಹೇಳಿಕೆಗೆ ವ್ಯತಿರಿಕ್ತವಾಗಿ ಸುಂದರ್ ಪಿಚ್ಚೈ ತಮ್ಮ ಶಾಲೆಯಲ್ಲಿ ಹಿಂದಿ ಸೇರಿದಂತೆ ಮೂರು ಭಾಷೆಗಳನ್ನು ಕಲಿತಿದ್ದರು” ಎಂದು ತಿರುಗೇಟು ನೀಡಿದ್ದಾರೆ.
ನಾನು ಶಾಲೆಯಲ್ಲಿ ಹಿಂದಿಯನ್ನು ಮೂರನೆ ಭಾಷೆಯಾಗಿ ಕಲಿತಿದ್ದೆ ಎಂದು ಸ್ವಯಂ ಸುಂದರ್ ಪಿಚ್ಚೈ ಅವರೇ ಹೇಳಿಕೊಂಡಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.ಜಿ.ಸೂರ್ಯ ಕೂಡಾ ಹೇಳಿದ್ದಾರೆ.