ಸಹೋದರಿಯ ವಿಚ್ಛೇದನಕ್ಕೆ ವಾದಿಸುತ್ತಿದ್ದ ವಕೀಲನ ಅಪಹರಣ, ಕಾರು ಹರಿಸಿ ಹತ್ಯೆ
ಲಕ್ನೋ: ಸಹೋದರಿಯ ವಿಚ್ಛೇದನಕ್ಕೆ ಕೋರ್ಟ್ ನಲ್ಲಿ ವಾದ ಮಂಡಿಸಿದ ವಕೀಲರೊಬ್ಬರನ್ನು ಅಪಹರಿಸಿ, ಥಳಿಸಿ, ಕಾರು ಹರಿಸಿ ಹತ್ಯೆ ಮಾಡಿದ ಪ್ರಕರಣ ಉತ್ತರ ಪ್ರದೇಶದ ಬಸ್ತಿಯಿಂದ ವರದಿಯಾಗಿದೆ. ವಕೀಲರ ಭಾವನನ್ನು ಪ್ರಕರಣದ ಸಂಬಂಧ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಚಂದ್ರಶೇಖರ ಯಾದವ್ (50) ಎಂಬ ವಕೀಲರನ್ನು ಶನಿವಾರ ಕಪ್ತಾನ್ ಗಂಜ್ನಿಂದ ಬೈಕ್ ನಲ್ಲಿ ಆಗಮಿಸುತ್ತಿದ್ದಾಗ ಅಪಹರಿಸಲಾಗಿತ್ತು. ಬೈದೋಲಾ ಅಜೈನ್ ನಿವಾಸಿಯಾಗಿದ್ದ ಯಾದವ್ ಅವರನ್ನು ನಾರಾಯಣಪುರ ಗ್ರಾಮದ ಬಳಿ ಸ್ಕಾರ್ಪಿಯೊದಲ್ಲಿ ಆಗಮಿಸಿದ ಕೆಲವರು ಅಪಹರಿಸಿದ್ದರು.
ಪೊಲೀಸರಿಗೆ ಮಾಹಿತಿ ದೊರಕುವ ವೇಳೆ ಆರೋಪಿಗಳು ಚಂದ್ರಶೇಖರ್ ಯಾದವ್ ಅವರನ್ನು ಥಳಿಸಿ ವಾಲ್ಟರ್ ಗಂಜ್ ಪ್ರದೇಶದ ರಸ್ತೆಯಲ್ಲಿ ಎಸೆದು ಆತ ತಪ್ಪಿಸಿಕೊಳ್ಳುವ ಮುನ್ನ ಕಾರು ಹರಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಬಸ್ತಿ ಜಿಲ್ಲಾ ಎಸ್ಪಿ ಅಭಿನಂದನ್ ಅವರ ಪ್ರಕಾರ, ಹತ್ಯೆಗೀಡಾದ ವಕೀಲ ತನ್ನ ಸಹೋದರಿಯ ವಿಚ್ಛೇದನ ಪ್ರಕರಣದಲ್ಲಿ ಆಕೆಯ ಪರ ವಾದಿಸುತ್ತಿದ್ದರು. ಆಕೆಯ ಪತಿ ರಂಜೀತ್ ಈ ಕಾರಣಕ್ಕೆ ಕೃತ್ಯ ಎಸಗಿರಬೇಕು ಎಂದು ಶಂಕಿಸಲಾಗಿದೆ. ವಿಚ್ಛೇದನ ಪ್ರಕರಣದಲ್ಲಿ ಹಣಕಾಸು ಆಯಾಮಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ಇತ್ತು ಎನ್ನಲಾಗಿದ್ದು, ರಂಜೀತ್ ಯಾದವ್ ಮತ್ತು ಆತನ ಸಹೋದರ ಸಂದೀಪ್ ವಕೀಲನನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂದು ಅಭಿನಂದನ್ ವಿವರಿಸಿದ್ದಾರೆ. ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು, ಇತರರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಹೇಳಿದ್ದಾರೆ.