ಕೋಮು ಸೌಹಾರ್ದ ಕದಡಲು ಯತ್ನ ಆರೋಪ: ಕಂಗನಾ ರಣಾವತ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ವಕೀಲರ ಸಂಘ ಆಗ್ರಹ
ಕಂಗನಾ ರಣಾವತ್ (PTI)
ಚಂಡೀಗಢ: ಪಂಜಾಬ್ ರಾಜ್ಯದ ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ರಾಜ್ಯದ ಕೋಮು ಸೌಹಾರ್ದತೆಯನ್ನು ಕದಡಲು ಯತ್ನಿಸಿರುವ ನಟಿ, ಸಂಸದೆ ಕಂಗನಾ ರಣಾವತ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಭಾರತೀಯ ವಕೀಲರ ಸಂಘದ ಪಂಜಾಬ್ ಘಟಕದ ಕಾರ್ಯಕಾರಿ ಸದಸ್ಯ ದರ್ಶನ್ ಸಿಂಗ್ ಧಲಿವಾಲ್ ಜಿಲ್ಲಾ ಪೊಲೀಸರನ್ನು ಆಗ್ರಹಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಮುಖ್ಯ ಕಚೇರಿ) ತುಷಾರ್ ಗುಪ್ತಾರನ್ನು ಭೇಟಿಯಾದ ದರ್ಶನ್ ಸಿಂಗ್ ಧಲಿವಾಲ್, ಜೂನ್ 6ರಂದು ತಮಗೆ ಕಪಾಳ ಮೋಕ್ಷ ಮಾಡಿದ ಸಿಐಎಸ್ಎಫ್ ಮಹಿಳಾ ಪೇದೆ ಕುಲ್ವಿಂದರ್ ಕೌರ್ ವಿರುದ್ಧ ಕಂಗನಾ ರಣಾವತ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರು ರಾಜ್ಯದ ಕೋಮು ಸೌಹಾರ್ದತೆಗೆ ಭಂಗ ತರಲು ಯತ್ನಿಸಿರುವುದರಿಂದ, ಅವರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಚುನಾಯಿತ ಸಂಸದೆಯಾಗಿರುವ ಕಂಗನಾ ರಣಾವತ್ ರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಮಹಿಳಾ ಪೇದೆ ಕುಲ್ವಿಂದರ್ ಕೌರ್ ಕಪಾಳ ಮೋಕ್ಷ ಮಾಡಿದ್ದರು. ಈ ಸಂಬಂಧ ಸಿಐಎಸ್ಎಫ್ ಕುಲ್ವಿಂದರ್ ಕೌರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ.