ವಯನಾಡ್ ನಲ್ಲಿ LDF, UDF ನಡೆಸಿದ ಹರತಾಳಗಳು ಬೇಜವಾಬ್ದಾರಿತನದ್ದು: ಕೇರಳ ಹೈಕೋರ್ಟ್ ಚಾಟಿಯೇಟು
ಕೇರಳ ಹೈಕೋರ್ಟ್ | PC : PTI
ಕೊಚ್ಚಿ: ಭೂಕುಸಿತ ಪೀಡಿತ ವಯನಾಡ್ ನಲ್ಲಿ ಇತ್ತೀಚೆಗೆ ಆಡಳಿತಾರೂಢ ಎಲ್ಡಿಎಫ್ ಹಾಗೂ ವಿರೋಧ ಪಕ್ಷವಾದ ಯುಡಿಎಫ್ ನಡೆಸಿದ ಸರಣಿ ಹರತಾಳಗಳನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡ ಕೇರಳ ಹೈಕೋರ್ಟ್, ಇಂತಹ ಕೃತ್ಯಗಳು ಬೇಜವಾಬ್ದಾರಿತನದ್ದಾಗಿದ್ದು, ಇಂತಹ ಹರತಾಳಗಳಿಂದ ಜನರ ಸಂಕಷ್ಟಗಳನ್ನು ಹೆಚ್ಚಿಸುವುದಲ್ಲದೆ ಬೇರೇನು ಸಾಧಿಸಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಜನಪ್ರತಿನಿಧಿಗಳ ಇಂತಹ ವರ್ತನೆಗಳ ಕುರಿತು ಎಚ್ಚರಿಕೆ ನೀಡಿದ ನ್ಯಾಯಾಲಯ, ಇದು ನ್ಯಾಯಾಲಯ ನಿರ್ದೇಶನದ ನಿರ್ದಾಕ್ಷಿಣ್ಯ ಉಲ್ಲಂಘನೆಯಾಗಿದ್ದು, ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ಹೇಳಿತು.
ನವೆಂಬರ್ 19ರಂದು ನಡೆದ ಹರತಾಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ಎ.ಕೆ.ಜಯಶಂಕರನ್ ನಂಬಿಯಾರ್ ಹಾಗೂ ನ್ಯಾ. ಕೆ.ವಿ.ಜಯಕುಮಾರ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು, ಇದನ್ನು ಸ್ವೀಕಾರಾರ್ಹವಲ್ಲ ಎಂದು ಕಿಡಿ ಕಾರಿತು.
ಸಾರ್ವಜನಿಕರಿಗೆ ಸೂಕ್ತ ತಿಳಿವಳಿಕೆ ನೀಡದೆ ದಿಢೀರನೆ ಹರತಾಳಗಳನ್ನು ನಡೆಸುವುದನ್ನು ನಿಷೇಧಿಸಿರುವ ಹೈಕೋರ್ಟ್ ನಿರ್ದೇಶನವನ್ನು ಎರಡು ರಾಜಕೀಯ ಪಕ್ಷಗಳು ಕಡೆಗಣಿಸಲು ಸಾಧ್ಯವಿಲ್ಲ ಎಂದೂ ಅದು ಎಚ್ಚರಿಸಿತು.
ಹರತಾಳವನ್ನು ಹೇಗೆ ಸಮರ್ಥಿಸಲು ಸಾಧ್ಯ ಹಾಗೂ ಆಡಳಿತಾರೂಢ ಸಿಪಿ(ಐ)ಎಂ ನೇತೃತ್ವದ ಎಲ್ಡಿಎಫ್ ಸರಕಾರ ಹೇಗೆ ಹರತಾಳ ನಡೆಸಿತು ಎಂದೂ ನ್ಯಾಯಾಲಯ ಪ್ರಶ್ನಿಸಿತು. ಅಲ್ಲದೆ, ಹರತಾಳವೊಂದೇ ಪ್ರತಿಭಟನೆಯ ಮಾರ್ಗವೇ ಎಂದು ಪ್ರಶ್ನಿಸಿದ ನ್ಯಾಯಾಲಯ, ಪ್ರಮುಖ ದುರಂತ ಸಂಭವಿಸಿರುವ ಪ್ರದೇಶದಲ್ಲಿ ಹರತಾಳ ನಡೆಸುವ ನಿರ್ಧಾರವು ಅಸಮಾಧಾನಕಾರಿಯಾಗಿದೆ” ಎಂದು ಅತೃಪ್ತಿ ವ್ಯಕ್ತಪಡಿಸಿತು.
ವಯನಾಡ್ ಭೂಕುಸಿತ ದುರಂತ ನಡೆದು ತಿಂಗಳುಗಳೇ ಕಳೆದರೂ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೆರವು ಬಿಡುಗಡೆ ಮಾಡದೆ ಇರುವುದನ್ನು ವಿರೋಧಿಸಿ, ಆಡಳಿತಾರೂಢ ಎಲ್ಡಿಎಫ್ ಮೈತ್ರಿಕೂಟ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟಗಳೆರಡೂ ವಯನಾಡ್ ನಲ್ಲಿ ಇತ್ತೀಚೆಗೆ ಹರತಾಳಗಳನ್ನು ನಡೆಸಿದ್ದವು.