ಯೂನುಸ್ ವಿವಾದಾತ್ಮಕ ಹೇಳಿಕೆಗಳಿಗೆ ಈಶಾನ್ಯ ರಾಜ್ಯಗಳ ನಾಯಕರ ಖಂಡನೆ
‘ಬಾಂಗ್ಲಾ ಸಮುದ್ರ ಪಾಲಕ’, ‘ಈಶಾನ್ಯ ರಾಜ್ಯಗಳಿಗೆ ಸಾಗರಮಾರ್ಗವಿಲ್ಲ’ ಎಂದು ಹೇಳಿದ್ದ ಯೂನುಸ್

PC : NDTV
ಹೊಸದಿಲ್ಲಿ: ಬಾಂಗ್ಲಾ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರು ಚೀನಾ ಪ್ರವಾಸದ ಸಂದರ್ಭ ಈಶಾನ್ಯ ಭಾರತದ ರಾಜ್ಯಗಳ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಭಾರತದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮುಹಮ್ಮದ್ಯೂಸ್ ಅವರ ಹೇಳಿಕೆಯು ‘‘ನಿಂದನಾತ್ಮಕ’’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮಾ ಬಣ್ಣಿಸಿದರೆ, ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಈಶಾನ್ಯ ಭಾರತದ ಬಗ್ಗೆ ಢಾಕಾದ ನಿಲುವು ಅಪಾಯಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಕೇಂದ್ರ ಸರಕಾರದ ವಿದೇಶಾಂಗ ನೀತಿಯನ್ನು ಅವರು ಪ್ರಶ್ನಿಸಿದ್ದಾರೆ.
ಯೂನುಸ್ ಅವರು ತನ್ನ ನಾಲ್ಕು ದಿನಗಳ ಚೀನಾ ಪ್ರವಾಸದ ವೇಳೆ ಈಶಾನ್ಯ ಭಾರತದ ರಾಜ್ಯಗಳ ಬಗ್ಗೆ ನೀಡಿದ್ದರೆನ್ನಲಾದ ವಿವಾದಾತ್ಮಕ ಹೇಳಿಕೆಯೊಂದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.‘‘ ಈಶಾನ್ಯ ಭಾರತದ ಏಳು ರಾಜ್ಯಗಳನ್ನು ಸಪ್ತ ಸಹೋದರಿಯರೆಂದು ಕರೆಯಲಾಗುತ್ತದೆ. ಅವು ಭಾರತದ ಭೂ ಆವೃತ ಪ್ರದೇಶವಾಗಿದೆ. ಸಮುದ್ರವನ್ನು ತಲುಪಲು ಅವರಿಗೆ ದಾರಿಯೇ ಇಲ್ಲ. ಬಾಂಗ್ಲಾಗೇಶವು ಆ ಪ್ರದೇಶದಲ್ಲಿರುವ ಸಮುದ್ರದ ‘ಪಾಲಕ’ನಾಗಿದೆ . ಈ ಸನ್ನಿವೇಶವು ಬೃಹತ್ ಅವಕಾಶವನ್ನು ತೆರೆದಿಟ್ಟಿದೆ. ಚೀನಾದ ಆರ್ಥಿಕತೆಯ ವಿಸ್ತರಣೆಯೂ ಇದರಿಂದ ಸಾಧ್ಯವಿದೆ’’ ಎಂದವರು ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಸಿದೆ.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸರಕಾರದ ಪದಚ್ಯುತಿಯ ಬಳಿಕ ಢಾಕಾವು ಬೀಜಿಂಗ್ ಜೊತೆಗೆ ನಿಕಟ ರಾಜತಾಂತ್ರಿಕ ಸಂಬಂಧಕ್ಕೆ ಯತ್ನಿಸುತ್ತಿರುವ ನಡುವೆಯೇ ಯೂನುಸ್ ಈ ಹೇಳಿಕೆ ನೀಡಿದ್ದಾರೆ. ಶೇಖ್ ಹಸೀನಾ ಅವರಿಗೆ ಆಶ್ರಯ ನೀಡಿರುವ ಭಾರತವು ಬಾಂಗ್ಲಾದ ಮಧ್ಯಂತರ ಸರಕಾರದ ಈ ಭೂರಾಜಕೀಯ ನಡೆಗಳನ್ನು ನಿಕಟವಾಗಿ ಗಮನಿಸುತ್ತಿದೆ ಎಂದು ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು ತಿಳಿಸಿದ್ದಾರೆ.
ಯೂನುಸ್ ಅವರ ಹೇಳಿಕೆಯನ್ನು ಖಂಡಿಸಿರುವ ಅಸ್ಸಾಂ ಮುಖ್ಯಮಂತ್ರಿ ಶರ್ಮಾ ಅವರು, ಈಶಾನ್ಯ ಭಾರತವನ್ನು ದೇಶದ ಉಳಿದ ಭಾಗದ ಜೊತೆ ಸಂಪರ್ಕಿಸಲು ಇನ್ನಷ್ಟು ಅಗಾಧವಾಗಿ ರೈಲು ಹಾಗೂ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಆಯಕಟ್ಟಿನ ‘ಚಿಕನ್ನೆಕ್ ಕಾರಿಡಾರ್’ಗೆ ಸಂಬಂಧಿಸಿ ಬಾಂಗ್ಲಾ ಈ ನಿರೂಪಣೆಯನ್ನು ಮಾಡಿದೆ ಎನ್ನಲಾಗಿದೆ. ಚಿಕನ್ ನೆಕ್ ಕಾರಿಡಾರ್ ಪ್ರದೇಶವು ಈಶಾನ್ಯ ಭಾರತವನ್ನು ದೇಶದ ಇತರ ಭಾಗಳ ಜೊತೆ ಸಂಪರ್ಕಿಸುತ್ತದೆ.ನೇಪಾಳ, ಬಾಂಗ್ಲಾ ಹಾಗೂ ಭೂತಾನ್ ಈ ಭೂಪ್ರದೇಶದ ಆಸುಪಾಸಿನಲ್ಲಿರುವ ದೇಶಗಳಾಗಿವೆ. ‘‘ಐತಿಹಾಸಿಕವಾಗಿಯೂ ಭಾರತದೊಳಗಿರುವ ಆಂತರಿಕ ಶಕ್ತಿಗಳು ಈಶಾನ್ಯ ಭಾರತವನ್ನು ಮುಖ್ಯಭೂಮಿಯಿಂದ ಭೌತಿಕವಾಗಿ ದೂರವಿರಿಸಲು ನಿರ್ಣಾಯಕವಾದ ಈ ಭೂಪ್ರದೇಶ (ಚಿಕನ್ನೆಕ್ ಕಾರಿಡಾರ್)ವನ್ನು ಕಡಿದುಹಾಕಬೇಕೆಂಬ ಅಪಾಯಕಾರಿ ಯೋಚನೆ ಮಾಡಿದ್ದವು. ಹೀಗಾಗಿ ಈಶಾನ್ಯರಾಜ್ಯಗಳನ್ನು ಭಾರತದ ಮುಖ್ಯಭೂಮಿಯೊಂದಿಗೆ ಸಂಪರ್ಕಿಸಲು ಪರ್ಯಾಯ ರಸ್ತೆ ಮಾರ್ಗಗಳನ್ನು ಅನ್ವೇಷಿಸಬೇಕಾಗಿದೆ’’ ಎಂದು ಶರ್ಮಾ ಅವರು ಹೇಳಿದ್ದಾರೆ.
ಯೂನಸ್ ಹೇಳಿಕೆಗೆ ತ್ರಿಪುರಾದ ‘ತಿಪ್ರಾ ಮೊಥಾ’ ಪಕ್ಷದ ನಾಯಕ ಪ್ರದ್ಯೋತ್ ಮಾಣಿಕ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದೊಮ್ಮೆ ಈಗಿನ ಬಾಂಗ್ಲಾದಲ್ಲಿರುವ ಚಿತ್ತಗಾಂಗ್ನಲ್ಲಿ ಆಳ್ವಿಕೆಯನ್ನು ನಡೆಸಿದ್ದ ನಮ್ಮ ಮೂಲನಿವಾಸಿಗಳಿಗೆ ಬೆಂಬಲ ನೀಡುವ ಮೂಲಕ ಸಮುದ್ರ ಮಾರ್ಗವನ್ನು ರೂಪಿಸಿಕೊಳ್ಳಲು ಭಾರತಕ್ಕೀಗ ಸಕಾಲವಾಗಿದೆ. ಬಾಂಗ್ಲಾದ ಕೃತಘ್ನ ಆಡಳಿತವನ್ನು ನಾವೀಗ ಅವಲಂಭಿಸಬೇಕಾಗಿಲ್ಲವೆಂದವರು ಹೇಳಿದ್ದಾರೆ.
1947ರಲ್ಲಿ ಚಿತ್ತಗಾಂಗ್ ನಲ್ಲಿ ವಾಸವಾಗಿದ್ದ ಗುಡ್ಡಗಾಡು ಜನರು ಭಾರತ ಭಾಗವಾಗಲು ಬಯಸಿದ್ದ ಹೊರತಾಗಿಯೂ ಅಲ್ಲಿನ ಬಂದರನ್ನು ಬಿಟ್ಟುಕೊಟ್ಟಿದ್ದುದು ಭಾರತದ ಅತಿ ದೊಡ್ಡ ಪ್ರಮಾದವಾಗಿದೆ. ತಾನೊಬ್ಬ ಸಮುದ್ರದ ಪಾಲಕನೆಂದು ಯೂನಸ್ ಭಾವಿಸಿದ್ದಿರಬಹುದು. ಆದರೆ ವಾಸ್ತವಿಕವಾಗಿ ಆತ ಈಗಾಗಲೇ 85 ರ ಪ್ರಾಯ ದಾಟಿರುವ ಮತ್ತು ತಾತ್ಕಾಲಿಕವಾಗಿ ನಿಯೋಜನೆಗೊಂಡಿರುವ ನಾಯಕನಾಗಿದ್ದಾನೆ ಎಂದು ಪ್ರದ್ಯೋತ್ ಮಾಣಿಕ್ಯ ಹೇಳಿದ್ದಾರೆ.
ಭಾರತಕ್ಕೆ ದಿಗ್ಬಂಧನ ವಿಧಿಸುವಂತೆ ಬಾಂಗ್ಲಾದೇಶವು ಚೀನಾವನ್ನು ಆಹ್ವಾನಿಸುತ್ತಿದೆಯೆಂದು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಅಪಾದಿಸಿದ್ದಾರೆ. ಈಶಾನ್ಯ ಭಾರತದ ಸುರಕ್ಷತೆಗೆ ಬಾಂಗ್ಲಾ ಸರಕಾರದ ನಿಲುವು ಅತ್ಯಂತ ಅಪಾಯಕಾರಿಯಾಗಿದೆ. ಕೇಂದ್ರ ಸರಕಾರವು ಮಣಿಪುರವನ್ನು ಗಮನಿಸುತ್ತಿಲ್ಲ ಮತ್ತು ಚೀನಾವು ಅರುಣಾಚಲ ಪ್ರದೇಶದಲ್ಲಿ ಹಳ್ಳಿಯೊಂದನ್ನು ಸ್ಥಾಪಿಸಿದೆ. ನಮ್ಮ ವಿದೇಶಾಂಗ ನೀತಿಯು ಎಂತಹ ಶೋಚನೀಯ ಸ್ಥಿತಿಯಲ್ಲಿದೆಯೆಂದರೆ, ಯಾವ ದೇಶವನ್ನು ಸೃಷ್ಟಿಸುವಲ್ಲಿ ನಾವು ಪ್ರಮುಖ ಪಾತ್ರವನ್ನು ವಹಿಸಿದ್ದೆವೋ ಅವರೀಗ ನಮ್ಮನ್ನು ಸುತ್ತುವರಿಯುವ ಯತ್ನದಲ್ಲಿ ಮಗ್ನರಾಗಿದ್ದಾರೆ’’ ಎಂದರು.
ಅಸ್ಸಾಂನ ಹಿರಿಯ ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ ಕೂಡಾ ಯೂನಸ್ ಹೇಳಿಕೆಯನ್ನು ಖಂಡಿಸಿದ್ದಾರೆ. ಈಶಾನ್ಯ ಭಾರತ ಹಾಗೂ ಚೀನಾದ ಕುರಿತು ಮುಹಮ್ಮದ್ ಯೂನಸ್ ಅವರ ಹೇಳಿಕೆಗಳು ತೀವ್ರ ಆತಂಕಕಾರಿಯಾಗಿದೆ ಹಾಗೂ ಅಸ್ವೀಕಾರಾರ್ಹವಾಗಿದೆ. ಭಾರತದ ಸಾರ್ವಭೌಮತೆ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಅದು ಕಡೆಗಣಿಸುತ್ತದೆ ಎಂದವರು ಹೇಳಿದ್ದಾರೆ.