ಪ್ರಾಂಶುಪಾಲರು, ಉಪನ್ಯಾಸಕರು ಮಕ್ಕಳನ್ನು ಹತೋಟಿಯಲ್ಲಿಡಬೇಕು: ಸಚಿವ ಮಧು ಬಂಗಾರಪ್ಪ
"ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಸೂಚಿಸಿಲ್ಲ"
ಸಚಿವ ಮಧು ಬಂಗಾರಪ್ಪ
ಬೆಂಗಳೂರು: ವಿದ್ಯಾರ್ಥಿ ತಪ್ಪು ಮಾತನಾಡಲು ಬಿಡಬಾರದಿತ್ತು. ಶಾಲೆಯ ಪ್ರಾಂಶುಪಾಲರು, ಉಪನ್ಯಾಸಕರು ಮಕ್ಕಳನ್ನು ಹತೋಟಿಯಲ್ಲಿಡಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ವಿದ್ಯಾಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಸೂಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು. ಆ ವಿದ್ಯಾರ್ಥಿ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ನಾನು ಮಾತನಾಡಿಲ್ಲ. ಕ್ರಮ ಕೈಗೊಳ್ಳಲು ನನಗೇನು ಅಧಿಕಾರವಿದೆ ಎಂದು ಕೇಳಿದರು.
ಅಂದು ಲೈವ್ ಕಾರ್ಯಕ್ರಮದಲ್ಲಿ 50 ಸಾವಿರ ಮಕ್ಕಳು ನೋಡುತ್ತಿದ್ದರು. ಸರಕಾರದಿಂದ ಮಕ್ಕಳ ಭವಿಷ್ಯಕ್ಕೆ ಮಾಡುತ್ತಿರುವ ಒಂದು ದೊಡ್ಡ ಯೋಜನೆಯದು. ಆ ಯೋಜನೆ ಬಗ್ಗೆ ದೊಡ್ಡಮಟ್ಟದಲ್ಲಿ ಪ್ರಚಾರ ನೀಡುವ ಬದಲು ಯಾರೋ ಒಬ್ಬ ವಿದ್ಯಾರ್ಥಿ ವಿದ್ಯಾಮಂತ್ರಿಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದನ್ನೇ ಮಾಧ್ಯಮ ಹೈಲೈಟ್ ಮಾಡಿದೆ. ನಿಮ್ಮ ಮಕ್ಕಳು ಈ ರೀತಿ ಮಾಡಿದ್ದರೆ ಮನೆಯಲ್ಲಿ ಬುದ್ದಿ ಹೇಳುತ್ತಿರಲಿಲ್ಲವೇ, ನಾನಾಗಿದ್ದರೆ ನನ್ನ ಮಗನಿಗೆ ಬುದ್ದಿ ಹೇಳುತ್ತಿದ್ದೆ ಎಂದು ಮಧು ಬಂಗಾರಪ್ಪ ಹೇಳಿದರು.
ವಿದ್ಯಾರ್ಥಿ ಹೇಳಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿದೆ. ಇಂತಹ ಟ್ರೋಲ್ಗಳಿಗೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಟ್ರೋಲ್ ಮಾಡಿ ನನ್ನನ್ನು ಬಗ್ಗಿಸಲು ಸಾಧ್ಯವಿಲ್ಲ. ಅಂತದ್ದಕ್ಕೆಲ್ಲ ಬಗ್ಗುವವನೂ ನಾನಲ್ಲ ಎಂದು ಮಧು ಬಂಗಾರಪ್ಪ ತಿಳಿಸಿದರು.
ಅನುದಾನ ವಿಚಾರದಲ್ಲಿ ಶಾಸಕರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ನಮ್ಮ ಸರಕಾರ ಹೆಚ್ಚಿನ ಅನುದಾನ ಕೊಟ್ಟಿದೆ. ನಾನು ಸೊರಬಕ್ಕೆ ಹೆಚ್ಚಿನ ಬಸ್ ತಂದಿದ್ದೇನೆ. ಸಾರಿಗೆ ಇಲಾಖೆ ಹೆಚ್ಚು ಬಸ್ ಖರೀದಿಸಿದೆ. ಅನುದಾನ ಇಲ್ಲದೆ ಇದನ್ನು ಮಾಡಲು ಆಗುತ್ತಾ?, ನಮಗೆ ಯಾವ ಅಸಮಾಧಾನವೂ ಇಲ್ಲ ಎಂದರು.