ತ್ರಿಪುರಾ ಉಪ ಚುನಾವಣೆ ಮತ ಎಣಿಕೆಗೆ ಎಡರಂಗ ಬಹಿಷ್ಕಾರ
Photo: PTI
ಅಗರ್ತಲಾ: ತ್ರಿಪುರಾ ಉಪ ಚುನಾವಣೆಯ ಮತ ಎಣಿಕೆಯನ್ನು ಬಹಿಷ್ಕರಿಸಲಾಗುವುದು ಎಂದು ಸಿಪಿಐ (ಮಾಕ್ಸಿಸ್ಟ್) ನೇತೃತ್ವದ ಎಡ ರಂಗ ಬುಧವಾರ ಘೋಷಿಸಿದೆ.
ದೊಡ್ಡ ಪ್ರಮಾಣದ ಚುನಾವಣಾ ಅಕ್ರಮಗಳನ್ನು ತಡೆಯಲು ಚುನಾವಣಾ ಆಯೋಗ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಎಡರಂಗ ಆರೋಪಿಸಿದೆ. ಸೆಪಾಹಿಜಾಲ ಜಿಲ್ಲೆಯ ಧಾನಪುರ ಹಾಗೂ ಬೋಕ್ಸಾನಗರ ವಿಧಾನಸಭಾ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದಿತ್ತು. ಈ ಚುನಾವಣೆಯ ಫಲಿತಾಂಶ ಶುಕ್ರವಾರ ಘೋಷಣೆಯಾಗಲಿದೆ.
ಬೋಕ್ಸಾನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಿಪಿಐ ಎಂ. ನಾಯಕ ಸಂಶುಲ್ ಹಕ್ ನಿಧನರಾಗಿರುವುದರಿಂದ ಹಾಗೂ ಧಾನಪುರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಜಯ ಗಳಿಸಿದ್ದ ಪ್ರತಿಮಾ ಭೌಮಿಕ್ ಅವರು ರಾಜೀನಾಮೆ ನೀಡಿರುವುದರಿಂದ ತೆರವಾದ ಸ್ಥಾನಕ್ಕೆ ಈ ಚುನಾವಣೆ ನಡೆಸಲಾಗಿದೆ. ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಸಿಪಿಐ ಮಾತ್ರ ಕಣದಲ್ಲಿದ್ದವು.
ಕಾಂಗ್ರೆಸ್ ಹಾಗೂ ಟಿಪ್ರಾ ಮೊತಾ ಪಕ್ಷ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ. ಚುನಾವಣೆಯಲ್ಲಿ ಆರಂಭದಿಂದಲೇ ಅಕ್ರಮ ನಡೆದಿರುವುದಾಗಿ ಪಕ್ಷ ಚುನಾವಣಾ ಆಯೋಗದ ಗಮನ ಸೆಳೆದಿತ್ತು ಎಂದು ಎಡ ರಂಗದ ಸಂಚಾಲಕ ನಾರಾಯಣ ಕಾರ್ ಅವರು ಬುಧವಾರ ರಾತ್ರಿ ಹೇಳಿದ್ದರು.
‘‘ಚುನಾವಣಾ ಆಯೋಗದ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಈ ಪರಿಸ್ಥಿತಿಯಲ್ಲಿ ಸೆಪ್ಟಂಬರ್ 8ರಂದು ನಡೆಯಲಿರುವ ಮತ ಎಣಿಕೆಯಲ್ಲಿ ಪಾಲ್ಗೊಳ್ಳುವುದರಲ್ಲಿ ಯಾವುದೇ ಅರ್ಥ ಇಲ್ಲ. ಆದುದರಿಂದ ನಾವು ಮತ ಎಣಿಕೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದೇವೆ’’ ಎಂದು ನಾರಾಯಣ ಕಾರ್ ಹೇಳಿದ್ದಾರೆ.