ಎಡಪಂಥೀಯರು ಒಲಿಂಪಿಕ್ಸ್ ಹೈಜಾಕ್ ಮಾಡಿದ್ದಾರೆ ಎಂದ ಕಂಗನಾ ರಣಾವತ್
ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವನ್ನು ಟೀಕಿಸಿದ ಬಿಜೆಪಿ ಸಂಸದೆ
ಕಂಗನಾ ರಣಾವತ್ (Photo:X/@KanganaTeam)
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವನ್ನು ಟೀಕಿಸಿರುವ ಬಾಲಿವುಡ್ ನಟಿ ಹಾಗೂ ಮಂಡಿ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು, ಅದು ಅತಿ ಲೈಂಗಿಕತೆ ಮತ್ತು ಧರ್ಮನಿಂದೆಯಿಂದ ಕೂಡಿತ್ತು, ಇದು ಎಡಪಂಥೀಯರು ಒಲಿಂಪಿಕ್ಸ್ ಅನ್ನು ಹೈಜಾಕ್ ಮಾಡಿರುವುದರ ಪರಿಣಾಮವಾಗಿದೆ ಎಂದು ಹೇಳಿದ್ದಾರೆ. ಸಮಾರಂಭದಲ್ಲಿ ಮಕ್ಕಳನ್ನು ಒಳಗೊಂಡಿದ್ದ ‘ದಿ ಲಾಸ್ಟ್ ಸಪರ್(ಯೇಸು ಕ್ರಿಸ್ತನ ಕೊನೆಯ ಭೋಜನ)’ ಅನ್ನು ಮರುರೂಪಿಸಿದ್ದ ಪ್ರದರ್ಶನವು ತೀವ್ರ ಟೀಕೆಗಳಿಗೆ ಗುರಿಯಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಪ್ರದರ್ಶನದ ಚಿತ್ರಗಳನ್ನು ಪೋಸ್ಟ್ ಮಾಡಿರುವ ಕಂಗನಾ, ‘ಅತಿ ಲೈಂಗಿಕತೆ ಮತ್ತು ಧರ್ಮನಿಂದೆಯಿಂದ ಕೂಡಿದ್ದ ದಿ ಲಾಸ್ಟ್ ಸಪರ್ನಲ್ಲಿ ಮಗುವೊಂದನ್ನು ಸೇರಿಸಿಕೊಂಡಿದ್ದಕ್ಕಾಗಿ ಪ್ಯಾರಿಸ್ ಒಲಿಂಪಿಕ್ಸ್ ಟೀಕೆಗೆ ಗುರಿಯಾಗಿದೆ. ಪ್ರದರ್ಶನದಲ್ಲಿ ನೀಲಿ ಬಣ್ಣ ಬಳಿದುಕೊಂಡಿದ್ದ ಬೆತ್ತಲೆ ವ್ಯಕ್ತಿಯನ್ನು ಯೇಸು ಕ್ರಿಸ್ತ ಎಂದು ತೋರಿಸಲಾಗಿತ್ತು, ಅವರು ಕ್ರೈಸ್ತ ಧರ್ಮವನ್ನು ಅಪಹಾಸ್ಯ ಮಾಡಿದ್ದಾರೆ. ಎಡಪಂಥೀಯರು 2024ರ ಒಲಿಂಪಿಕ್ಸ್ನ್ನು ಸಂಪೂರ್ಣವಾಗಿ ಹೈಜಾಕ್ ಮಾಡಿದ್ದಾರೆ. ನಾಚಿಕೆಗೇಡು’ ಎಂದು ಹೇಳಿದ್ದಾರೆ.
‘ಇದು ಫ್ರಾನ್ಸ್ ಒಲಿಂಪಿಕ್ಸ್ 2024ಕ್ಕೆ ಜಗತ್ತನ್ನು ಸ್ವಾಗತಿಸಿದ ರೀತಿ. ಅವರು ಯಾವ ಸಂದೇಶವನ್ನು ರವಾನಿಸಲು ಪ್ರಯತ್ನಿಸುತ್ತಿದ್ದಾರೆ? ಸೈತಾನನ ಜಗತ್ತಿಗೆ ಸ್ವಾಗತವೇ? ಇದೇ ಅವರ ಉದ್ದೇಶವೇ?’ ಎಂದು ಕಂಗನಾ ಇನ್ನೊಂದು ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಪ್ರದರ್ಶನಗಳ ಕೊಲಾಜ್ ಹಂಚಿಕೊಂಡಿರುವ ಅವರು, ‘ಒಲಿಂಪಿಕ್ಸ್ ಉದ್ಘಾಟನೆಯು ಸಲಿಂಗ ಕಾಮದ ಪ್ರಚಾರಕ್ಕಷ್ಟೇ ಸೀಮಿತವಾಗಿತ್ತು. ನಾನು ಸಲಿಂಗ ಕಾಮಕ್ಕೆ ವಿರುದ್ಧವಾಗಿಲ್ಲ, ಆದರೆ ಯಾವುದೇ ಲೈಂಗಿಕತೆಯೊಂದಿಗೆ ಒಲಿಂಪಿಕ್ಸ್ ಹೇಗೆ ಸಂಬಂಧಿಸಿದೆ ಎನ್ನುವುದು ನನಗೆ ಅರ್ಥವಾಗಿಲ್ಲ. ಮಾನವ ಪಾರಮ್ಯವನ್ನು ಸಂಭ್ರಮಿಸುವ ಜಾಗತಿಕ ಕಾರ್ಯಕ್ರಮದ ಮೇಲೆ ಲೈಂಗಿಕತೆಯ ಚರ್ಚೆಗಳ ಮೋಡ ಕವಿದಿದ್ದೇಕೆ? ಲೈಂಗಿಕತೆ ಏಕೆ ಖಾಸಗಿ ವಿಷಯವಾಗಿ ಉಳಿಯಬಾರದು? ಅದು ಏಕೆ ರಾಷ್ಟೀಯ ಗುರುತಾಗಬೇಕು? ಇದು ವಿಲಕ್ಷಣವಾಗಿದೆ ’ ಎಂದು ಕಂಗನಾ ತನ್ನ ಪೋಸ್ಟ್ನಲ್ಲಿ ಬರೆದಿದ್ದಾರೆ.
ಕಂಗನಾರ ಅಭಿಪ್ರಾಯವನ್ನೇ ಪ್ರತಿಧ್ವನಿಸಿರುವ ಹಲವಾರು ನೆಟ್ಟಿಗರು ಉದ್ಘಾಟನಾ ಸಮಾರಂಭದಲ್ಲಿಯ ಪ್ರದರ್ಶನವು ಕೈಸ್ತರಿಗೆ ಅವಮಾನವಾಗಿತ್ತು ಎಂದು ಕಿಡಿ ಕಾರಿದ್ದಾರೆ. ಆದರೆ ಪ್ಯಾರಿಸ್ ಒಲಿಂಪಿಕ್ಸ್ ಸಂಘಟಕರಾಗಲೀ ಪ್ರದರ್ಶಕರಾಗಲೀ ಅದು ದಿ ಲಾಸ್ಟ್ ಸಪರ್ನ ಸನ್ನಿವೇಶವಾಗಿತ್ತು ಎನ್ನುವುದನ್ನು ದೃಢಪಡಿಸಿಲ್ಲ.
ಈ ನಡುವೆ ಪ್ರದರ್ಶನವನ್ನು ‘ಕ್ರೈಸ್ತರಿಗೆ ಅತ್ಯಂತ ಅಗೌರವ’ ಎಂದು ಬಣ್ಣಿಸಿರುವ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು,‘‘ಲೇಡಿ ಗಾಗಾರ ಪ್ರದರ್ಶನವು ಕೂಡ ಕುಪಿತ ನೆಟ್ಟಿಗರನ್ನು ಸಮಾಧಾನಿಸಲು ಸಾಧ್ಯವಾಗಲಿಲ್ಲ,ಅವರು ಇದನ್ನು ‘ಫ್ರೆಂಚ್ ಧ್ವಜದ ಮೇಲೆ ಮಲವಿಸರ್ಜನೆಗೆ ಸಮಾನ’ ಎಂದು ಕರೆದಿದ್ದಾರೆ ’’ ಎಂದು ಹೇಳಿದ್ದಾರೆ.