ಶಾಸಕಾಂಗವು ತೀರ್ಪಿನಲ್ಲಿಯ ಕೊರತೆಯನ್ನು ನಿವಾರಿಸಲು ಹೊಸ ಕಾನೂನು ತರಬಹುದು, ಆದರೆ ಅದನ್ನು ತಳ್ಳಿಹಾಕುವಂತಿಲ್ಲ: ಸಿಜೆಐ ಡಿ.ವೈ.ಚಂದ್ರಚೂಡ್
ಸಿಜೆಐ ಡಿ.ವೈ.ಚಂದ್ರಚೂಡ್ Photo- PTI
ಹೊಸದಿಲ್ಲಿ: ಶಾಸಕಾಂಗವು ನ್ಯಾಯಾಲಯದ ತೀರ್ಪನ್ನು ನೇರವಾಗಿ ತಳ್ಳಿಹಾಕುವಂತಿಲ್ಲ ಎಂದು ಶನಿವಾರ ಇಲ್ಲಿ ಒತ್ತಿ ಹೇಳಿದ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಡಿ.ವೈ.ಚಂದ್ರಚೂಡ್ ಅವರು,ನ್ಯಾಯಾಂಗ ಆದೇಶದಲ್ಲಿಯ ಕೊರತೆಯನ್ನು ಸರಿಪಡಿಸಲು ಅದು ಹೊಸ ಕಾನೂನನ್ನು ತರಬಹುದು ಎಂದು ತಿಳಿಸಿದರು.
ʼಹಿಂದುಸ್ಥಾನ್ ಟೈಮ್ಸ್ʼ ನಾಯಕತ್ವ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದ ಅವರು,ನ್ಯಾಯಾಧೀಶರು ಪ್ರಕರಣಗಳನ್ನು ನಿರ್ಧರಿಸುವಾಗ ಸರಕಾರದ ವಿವಿಧ ಘಟಕಗಳಂತೆ ತಮ್ಮ ತೀರ್ಪುಗಳಿಗೆ ಸಮಾಜವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಬಗ್ಗೆ ಆಲೋಚನೆಯನ್ನು ಮಾಡುವುದಿಲ್ಲ ಎಂದು ಹೇಳಿದರು.
ನ್ಯಾಯಾಲಯದ ತೀರ್ಪು ಬಂದಾಗ ಶಾಸಕಾಂಗವು ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎನ್ನುವುದನ್ನು ಪ್ರತ್ಯೇಕಿಸುವ ಗೆರೆಯೊಂದಿದೆ. ತೀರ್ಪು ನಿರ್ದಿಷ್ಟ ವಿಷಯವನ್ನು ನಿರ್ಧರಿಸುತ್ತದೆ ಮತ್ತು ಕಾನೂನಿನಲ್ಲಿಯ ಕೊರತೆಯೊಂದನ್ನು ಬೆಟ್ಟು ಮಾಡುತ್ತಿದೆ ಎಂದಿದ್ದರೆ ಕೊರತೆಯನ್ನು ಸರಿಪಡಿಸಲು ಹೊಸ ಕಾನೂನನ್ನು ತರುವ ಮುಕ್ತ ಅವಕಾಶವನ್ನು ಶಾಸಕಾಂಗವು ಯಾವಾಗಲೂ ಹೊಂದಿದೆ ಎಂದು ಹೇಳಿದ ನ್ಯಾ.ಚಂದ್ರಚೂಡ್ ಅವರು, ತೀರ್ಪು ತಪ್ಪಾಗಿದೆ ಎಂದು ನಾವು ಭಾವಿಸಿದ್ದೇವೆ ಮತ್ತು ಅದನ್ನು ತಳ್ಳಿಹಾಕುತ್ತೇವೆ ಎಂದು ಶಾಸಕಾಂಗವು ಹೇಳುವಂತಿಲ್ಲ. ನ್ಯಾಯಾಲಯದ ತೀರ್ಪನ್ನು ಶಾಸಕಾಂಗವು ನೇರವಾಗಿ ತಳ್ಳಿಹಾಕುವಂತಿಲ್ಲ ಎಂದರು.
ನ್ಯಾಯಾಧೀಶರು ತೀರ್ಪುಗಳನ್ನು ಪ್ರಕಟಿಸುವಾಗ ಸಾಂವಿಧಾನಿಕ ನೈತಿಕತೆಯಿಂದ ಮಾರ್ಗದರ್ಶಿತರಾಗಿರುತ್ತಾರೆ, ಸಾರ್ವಜನಿಕ ನೈತಿಕತೆಯಿಂದಲ್ಲ ಎಂದು ಹೇಳಿದ ಅವರು, ‘ನ್ಯಾಯಾಧೀಶರು ಚುನಾಯಿತ ವ್ಯಕ್ತಿಗಳಲ್ಲ ಎನ್ನುವುದು ನಮ್ಮ ಕೊರತೆಯಲ್ಲ, ಅದೇ ನಮ್ಮ ಶಕ್ತಿಯಾಗಿದೆ’ ಎಂದರು.