ಲೇಹ್ ಅನ್ನು ರಣರಂಗವನ್ನಾಗಿ ಪರಿವರ್ತಿಸಲಾಗಿದೆ: ಸೋನಮ್ ವಾಂಗ್ಚುಕ್ ಆರೋಪ
ಸೋನಮ್ ವಾಂಗ್ಚುಕ್ | Photo: PTI
ಲೇಹ್: ಲೇಹ್ನಲ್ಲಿ ಬಿಗಿ ಭದ್ರತೆ ಏರ್ಪಡಿಸಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ಹವಾಮಾನ ಹೋರಾಟಗಾರ ಹಾಗೂ ಶೈಕ್ಷಣಿಕ ಸುಧಾರಕ ಸೋನಮ್ ವಾಂಗ್ಚುಕ್, ಲೇಹ್ ಅನ್ನು ರಣರಂಗವನ್ನಾಗಿ ಮಾರ್ಪಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸೋನಮ್ ವಾಂಗ್ಚುಕ್ ನಡೆಸಲಿರುವ ಗಡಿಯೆಡೆಗಿನ ಮೆರವಣಿಗೆಗೂ ಮುನ್ನ ಲಡಾಖ್ನಲ್ಲಿ ನಿಷೇಧಾಜ್ಞೆ ಜಾರಿ ಹಾಗೂ ಅಂತರ್ಜಾಲ ಸೇವೆಯ ಮೇಲೆ ನಿರ್ಬಂಧ ವಿಧಿಸಲಾಗಿದೆ. 'ಪಶ್ಮಿನ ಮೆರವಣಿಗೆ' ಎಂದು ಕರೆಯಲಾಗಿರುವ ಈ ಮೆರವಣಿಗೆಯು ಲಡಾಖ್ನ ವಸ್ತು ಸ್ಥಿತಿ ಹಾಗೂ ರಾಜ್ಯ ಸ್ಥಾನಮಾನದ ಕುರಿತು ಗಮನ ಸೆಳೆಯುವ ಉದ್ದೇಶ ಹೊಂದಿದೆ.
ಗಡಿಯವರೆಗೆ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಗ್ರನೇಡ್ಗಳು, ಗಲಭೆ ನಿಯಂತ್ರಕ ಪಡೆಗಳು ಹಾಗೂ ತಡೆಗೋಡೆಗಳೊಂದಿಗೆ ಸಜ್ಜುಗೊಂಡಿವೆ. ಈ ನಡೆಯನ್ನು ಟೀಕಿಸಿದ ಸೋನಮ್ ವಾಂಗ್ಚುಕ್, ಶಾಂತಿಯುತ ಮೆರವಣಿಗೆ ನಡೆಸುತ್ತಿದ್ದರೂ, ಬೆದರಿಕೆ ತಂತ್ರಗಳ ಮೂಲಕ ಹೋರಾಟವನ್ನು ದುರ್ಬಲಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.
'ಪಶ್ಮಿನ ಮೆರವಣಿಗೆ'ಯಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಈ ಮೆರವಣಿಗೆಯು ವಾಸ್ತವ ನಿಯಂತ್ರಣ ರೇಖೆಯತ್ತ ತೆರಳಲಿದೆ. ಲಡಾಖ್ನ ಸುಮಾರು 4,000 ಚದರ ಕಿಮೀ ಹುಲ್ಲುಗಾವಲನ್ನು ಚೀನಾ ಅತಿಕ್ರಮಣ ಮಾಡಿರುವುದರ ಮೇಲೆ ಬೆಳಕು ಚೆಲ್ಲಲು ಈ ಮೆರವಣಿಗೆ ನಡೆಸಲಾಗುತ್ತಿದೆ ಎಂದು ಸೋನಮ್ ವಾಂಗ್ಚುಕ್ ಹೇಳಿದ್ದಾರೆ.