ಸೋನಮ್ ವಾಂಗ್ಚುಕ್ ನೇತೃತ್ವದಲ್ಲಿ ಲೇಹ್ನಿಂದ ದಿಲ್ಲಿ ಚಲೋ ಪಾದಯಾತ್ರೆ ಆರಂಭ
ಸೋನಮ್ ವಾಂಗ್ಚುಕ್ | PC : PTI
ಲೇಹ್: ಲಡಾಕ್ನ ಖ್ಯಾತ ಸಂಶೋಧಕ ಹಾಗೂ ಹವಾಮಾನ ಬದಲಾವಣೆ ಹೋರಾಟಗಾರ ಸೋನಮ್ ವಾಂಗ್ಚುಕ್ ನೇತೃತ್ವದಲ್ಲಿ 100ಕ್ಕೂ ಅಧಿಕ ಮಂದಿ ಕಾರ್ಯಕರ್ತರ ಗುಂಪೊಂದು ರವಿವಾರ ಲೇಹ್ನಿಂದ ಹೊಸದಿಲ್ಲಿಗೆ ಪಾದಯಾತ್ರೆಯನ್ನು ಆರಂಭಿಸಿತು. ತಮ್ಮ ನಾಲ್ಕು ಅಂಶಗಳ ಕಾರ್ಯಸೂಚಿಯ ಕುರಿತು ಲಡಾಕ್ನ ನಾಯಕತ್ವದ ಜೊತೆ ಸ್ಥಗಿತಗೊಂಡಿರುವ ಮಾತುಕತೆಯನ್ನು ಪುನಾರಂಭಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಲು ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಲೇಹ್ ಅಪೆಕ್ಸ್ ಘಟಕ (ಎಲ್ಎಬಿ)ವು ಕಾರ್ಗಿಲ್ ಪ್ರಜಾತಾಂತ್ರಿಕ ಮೈತ್ರಿಕೂಟದ (ಕೆಡಿಎ)ದ ಸಹಭಾಗಿತ್ವದೊಂದಿಗೆ ದಿಲ್ಲಿ ಚಲೋ ಪಾದಯಾತ್ರೆಯನ್ನು ಆಯೋಜಿಸಿದೆ. ಲಡಾಕ್ಗೆ ರಾಜ್ಯದಸ್ಥಾನಮಾನ, ಸಂವಿಧಾನದ ಆರನೇ ಶೆಡ್ಯೂಲ್ನ ವಿಸ್ತರಣೆ, ಲಡಾಕ್ನ ಸಾರ್ವಜನಿಕ ಸೇವಾ ಆಯೋಗದಿಂದ ತ್ವರಿತ ನೇಮಕಾತಿ ಪ್ರಕ್ರಿಯೆ ಹಾಗೂ ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗೆ ಪ್ರತ್ಯೇಕ ಲೋಕಸಭಾ ಸ್ಥಾನಗಳ ಸೃಷ್ಟಿ ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಸಂಘಟನೆಗಳು ಕಳೆದ ನಾಲ್ಕು ವರ್ಷಗಳಿಂದ ಚಳವಳಿಯನ್ನು ನಡೆಸುತ್ತಿವೆ.
ಕಳೆದ ಮಾರ್ಚ್ನಲ್ಲಿ ಕೇಂದ್ರ ಸರಕಾರ ಹಾಗೂ ಲಡಾಕ್ನ ಪ್ರತಿನಿಧಿಗಳ ನಡುವೆ ನಡೆದ ಮಾತುಕತೆಗಳು ವಿಫಲವಾಗಿದ್ದವು.
ಲೇಹ್ನ ಎನ್ಡಿಎಸ್ ಸ್ಮಾರಕ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಭಾರತ್ ಮಾತಾ ಕೀ ಜೈ ’, ‘ಆರನೇ ಶೆಡ್ಯೂಲ್ ನಮಗೆ ಬೇಕು’ ಎಂಬಿತ್ಯಾದಿ ಕಾರ್ಯಕರ್ತರ ಘೋಷಣೆಗಳ ನಡುವೆ ಎಲ್ಎಬಿ ಅಧ್ಯಕ್ಷ ತುಪಸ್ಟಾನ್ ಚೆವಾಂಗ್ ಪಾದಯಾತ್ರೆಗೆ ಚಾಲನೆ ನೀಡಿದರು.ವಾಂಗ್ಚುಕ್ ಅವರು ಮಾತನಾಡಿ ಗಾಂಧಿ ಜಯಂತಿಯಂದು ಪಾದಯಾತ್ರೆಯು ದಿಲ್ಲಿಯನ್ನು ತಲುಪಲಿದ್ದು ಶುಭ ಸುದ್ದಿಯೊಂದಿಗೆ ಸರಕಾರವು ತಮ್ಮನ್ನು ಸ್ವಾಗತಿಸಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಹಿರಿಯರು, ಮಹಿಳೆಯರು ಹಾಗೂ ಯುವಜನರು ಸೇರಿದಂತೆ‘‘ಸಮಾಜದ ಎಲ್ಲಾ ವರ್ಗಗಳ ಜನರು ನಮ್ಮ ಬೇಡಿಕೆಗನ್ನು ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದು ಸಂತೃಪ್ತಿ ತಂದಿದೆ. ಸಂವಿಧಾನದ ಆರನೇ ಶೆಡ್ಯೂಲ್ ಹಾಗೂ ಶಾಸಕಾಂಗವನ್ನು ಹೊಂದಿದ ಕೇಂದ್ರಾಡಳಿವಾಗಿ ಲಡಾಕ್ಗೆ ಸ್ಥಾನಮಾನವ ನಮ್ಮ ಪ್ರಜಾತಾಂತ್ರಿಕ ಹಕ್ಕಾಗಿದೆ. ನಮ್ಮ ಆಶೋತ್ತರಗಳಿಗೆ ಅನುಗುಣವಾಗಿ ಲಡಾಕ್ನ ಅಭಿವೃದ್ಧಿ ಹಾಗೂ ನಿರ್ವಹಣೆಯಾಗಬೇಕೆಂದು ನಾವು ಬಯಸುತ್ತಿದ್ದೇವೆ ಎಂದರು. ಸರಕಾರವು ಎರಡನೆ ಬಾರಿ ಯೋಚಿಸದೆ ಲಡಾಕ್ ಜನತೆಯ ಬೇಡಿಕೆಯನ್ನು ಈಡೇರಿಸಬೇಕೆಂದು ಆವರು ಆಗ್ರಹಿಸಿದರು.
ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಾಂಗ್ಚುಕ್ಕಳೆದ ಮಾರ್ಚ್ನಲ್ಲಿ 21 ದಿನಗಳ ನಿರಶನ ನಡೆಸಿದ್ದರು.