"ಜಮ್ಮು ಮತ್ತು ಕಾಶ್ಮೀರ ನರಕಕ್ಕೆ ಹೋಗಲಿ": ವಿವಾದದ ಕಿಡಿ ಹೊತ್ತಿಸಿದ ಫಾರೂಖ್ ಅಬ್ದುಲ್ಲಾ ಹೇಳಿಕೆ
ಫಾರೂಖ್ ಅಬ್ದುಲ್ಲಾ | Photo: PTI
ಹೊಸದಿಲ್ಲಿ: ಸಂಸತ್ ಭವನದ ಹೊರಗೆ " ಜಮ್ಮು ಮತ್ತು ಕಾಶ್ಮೀರ ನರಕಕ್ಕೆ ಹೋಗಲಿ" ಎಂಬ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಖ್ ಅಬ್ದುಲ್ಲಾರ ಹೇಳಿಕೆಯು ವಿವಾದದ ಕಿಡಿ ಹೊತ್ತಿಸಿದೆ ಎಂದು indiatoday.in ವರದಿ ಮಾಡಿದೆ.
"ಜಮ್ಮು ಮತ್ತು ಕಾಶ್ಮೀರ ನರಕಕ್ಕೆ ಹೋಗಲಿ. ಅದಕ್ಕಿಂತ ಹೆಚ್ಚು ನಾನೇನನ್ನು ಹೇಳಲು ಸಾಧ್ಯ? ನೀವಲ್ಲಿ ರಾಜ್ಯದ ಸ್ಥಾನಮಾನ ಕಿತ್ತುಕೊಂಡಿರಿ. ನಿಮಗೆ ಜನರ ಹೃದಯಗಳನ್ನು ಗೆಲ್ಲಬೇಕಿದೆ. ಆದರೆ, ಜನರನ್ನು ಮತ್ತಷ್ಟು ದೂರವಾಗಿಸುವ ಕೃತ್ಯಗಳನ್ನು ಎಸಗಿದರೆ ನೀವು ಜನರ ಹೃದಯವನ್ನು ಹೇಗೆ ಗೆಲ್ಲುತ್ತೀರಿ?" ಎಂದು ಸಂಸತ್ ಭವನದ ಹೊರಗೆ ಫಾರೂಖ್ ಅಬ್ದುಲ್ಲಾ ಪ್ರಶ್ನಿಸುತ್ತಿರುವ ವಿಡಿಯೊ ವೈರಲ್ ಆಗಿದೆ.
ವಿಧಿ 370ರ ಅಡಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ಕೇಂದ್ರ ಸರ್ಕಾರವು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಮರುದಿನ ಫಾರೂಖ್ ಅಬ್ದುಲ್ಲಾರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಫಾರೂಖ್ ಅಬ್ದುಲ್ಲಾರ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದ್ದರೆ, ಇಂಡಿಯಾ ಮೈತ್ರಿಕೂಟ ಕೂಡಾ ಅವರ ಹೇಳಿಕೆಯನ್ನು ಖಂಡಿಸಿದೆ.