ಇಂಡಿಯಾ ಒಕ್ಕೂಟದ ಮೈತ್ರಿ ರಾಷ್ಟ್ರ ಮಟ್ಟದಲ್ಲಾ, ರಾಜ್ಯ ಮಟ್ಟದಲ್ಲಾ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಲಿ: ಅಖಿಲೇಶ್ ಯಾದವ್
File Photo
ಕಾನ್ಪುರ: ಇಂಡಿಯಾ ಮೈತ್ರಿಕೂಟದ ಪಕ್ಷಗಳ ಮೈತ್ರಿ ಮತ್ತು ಸ್ಥಾನ ಹಂಚಿಕೆ ರಾಜ್ಯ ಮಟ್ಟದಲ್ಲಿ ನಡೆಯುವುದೇ ಅಥವಾ ರಾಷ್ಟ್ರಿಯ ಮಟ್ಟದಲ್ಲೇ ಎನ್ನುವುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಹೇಳಿದ್ದಾರೆ.
ಇಂಡಿಯಾ ಒಕ್ಕೂಟದ ಘಟಕ ಪಕ್ಷಗಳಾಗಿರುವ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮಧ್ಯಪ್ರದೇಶ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆ ಒಪ್ಪಂದಕ್ಕೆ ಬರಲು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಪ್ರಶ್ನೆ ಕೇಳಿದ್ದಾರೆ. ರಾಜ್ಯದಲ್ಲಿ ನವೆಂಬರ್ 17ರಂದು ಮತದಾನ ನಡೆಯಲಿದೆ.
‘‘ಇಂಡಿಯಾ ಒಕ್ಕೂಟದ ಬಗ್ಗೆ ಕಾಂಗ್ರೆಸ್ ಸ್ಪಷ್ಟೀಕರಣ ನೀಡಬೇಕು’’ ಎಂದು ಕಾನ್ಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್ ಹೇಳಿದರು. ‘‘ಸ್ಥಾನ ಹೊಂದಾಣಿಕೆಯು ರಾಷ್ಟೀಯ ಮಟ್ಟದಲ್ಲಿ ನಡೆಯುವುದಾದರೆ, ರಾಜ್ಯ ಮಟ್ಟದಲ್ಲಿ ನಡೆಯುವುದು ಅಲ್ಲವಾದರೆ, ಭವಿಷ್ಯದಲ್ಲಿ ಅದು ರಾಜ್ಯ ಮಟ್ಟದಲ್ಲಿ ನಡೆಯುವುದಿಲ್ಲ. ಈ ಬಗ್ಗೆ ನಾನು ಏನೂ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು’’ ಎಂದರು.
‘‘ಸ್ಥಾನ ಹೊಂದಾಣಿಕೆ ಮಾತುಕತೆ 1 ಗಂಟೆಯವರೆಗೆ ಸಾಗಿದೆ. ಅದು ಇನ್ನೂ ಆಗಿಲ್ಲ’’ ಎಂದರು.
ಬಿಜೆಪಿಯೇತರ ಮತಗಳು ವಿಭಜನೆಯಾಗುವುದನ್ನು ತಪ್ಪಿಸಲು ತಾನು ಇಂಡಿಯಾ ಒಕ್ಕೂಟದ ಭಾಗವಾಗಿ ಮಧ್ಯಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸಮಾಜವಾದಿ ಪಕ್ಷದ ವಕ್ತಾರ ಸುನೀಲ್ ಸಿಂಗ್ ಯಾದವ್ ರವಿವಾರ ಘೋಷಿಸಿದ್ದಾರೆ.
ಆದರೆ, ಒಂದು ದಿನದ ಬಳಿಕ, ‘‘ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡುವ ಎಲ್ಲಾ ಸಾಧ್ಯತೆಗಳು ಮುಗಿದಿವೆ’’ ಎಂದು ಸಮಾಜವಾದಿ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ರಾಮಾಯಣ್ ಸಿಂಗ್ ಪಟೇಲ್ ಹೇಳಿದ್ದಾರೆ.
‘‘ಕಾಂಗ್ರೆಸ್ ನಾಯಕತ್ವದೊಂದಿಗೆ ನಾವು ಸ್ವಲ್ಪ ಮಾತುಕತೆ ನಡೆಸಿದ್ದೇವೆ. ಆದರೆ, ರವಿವಾರ ಅದು ಮುರಿದು ಬಿದ್ದಿದೆ’’ ಎಂದು ಪಟೇಲ್ ಹೇಳಿದರು. ‘‘ನಾವು ನಮಗೆ ಬೇಕಾದಂತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಮತ್ತು ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಉತ್ತಮ ನಿರ್ವಹಣೆ ನೀಡುತ್ತೇವೆ’’ ಎಂದು ಹೇಳಿದರು.
ರವಿವಾರ, ಸಮಾಜವಾದಿ ಪಕ್ಷ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿದ್ದ ಏಳು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.