ಗಾಝಾ ಯುದ್ಧದ ಪತ್ರಕರ್ತರಿಗೆ ಏಕತೆ ವ್ಯಕ್ತಪಡಿಸಿ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರಿಂದ ಪತ್ರ
ಸಾಂದರ್ಭಿಕ ಚಿತ್ರ | Photo: NDTV
ನ್ಯೂಯಾರ್ಕ್: ಸಂಘರ್ಷಪೀಡಿತ ಗಾಝಾದಲ್ಲಿ ವರದಿಗಾರಿಕೆ ಮಾಡುತ್ತಿರುವ ಪತ್ರಕರ್ತರೊಂದಿಗೆ ಏಕತೆಯನ್ನು ವ್ಯಕ್ತಪಡಿಸಿ,ಜಗತ್ತಿನಾದ್ಯಂತದ 36ಕ್ಕೂ ಅಧಿಕ ಸುದ್ದಿ ಸಂಘಟನೆಗಳ ಮುಖಂಡರುಗಳು ಪತ್ರವೊಂದಕ್ಕೆ ಸಹಿಹಾಕಿದ್ದಾರೆ. ಯುದ್ಧಪ್ರದೇಶದಲ್ಲಿ ಪ್ರಾಣದಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಸುರಕ್ಷತೆ ಹಾಗೂ ಸ್ವಾತಂತ್ರ್ಯಕ್ಕೆ ಕರೆ ನೀಡಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧದಲ್ಲಿ ಕನಿಷ್ಠ 89 ಮಂದಿ ಪತ್ರಕರ್ತರು ಹಾಗೂ ಮಾಧ್ಯಮ ಸಿಬ್ಬಂದಿ ಸಾವನ್ನಪ್ಪಿದ್ದು, ಅವರಲ್ಲಿ ಬಹುತೇಕ ಮಂದಿ ಫೆಲೆಸ್ತೀನಿಯರೆಂದು ಗುರುವಾರ ಬಿಡುಗಡೆಗೊಳಿಸಲಾದ ಈ ಪತ್ರದಲ್ಲಿ ಪತ್ರಕರ್ತರ ರಕ್ಷಣಾ ಸಮಿತಿಯು ತಿಳಿಸಿದೆ.
ಅಸೋಸಿಯೇಟೆಡ್ ಪ್ರೆಸ್, ದಿ ನ್ಯೂಯಾರ್ಕ್ ಟೈಮ್ಸ್, ದಿ ವಾಶಿಂಗ್ಟನ್ ಪೋಸ್ಟ್, ಲಾಸ್ ಏಂಜಲೀಸ್ ಟೈಮ್ಸ್, ರಾಯ್ಟರ್ರ್ಸ್,ನ್ಯೂಯಾರ್ಕರ್, ಸಿಎನ್ಎನ್, ಎನ್ಬಿಸಿ ನ್ಯೂಸ್, ಬಿಬಿಸಿ ಸುದ್ದಿಸಂಸ್ಥೆಗಳ ಮುಖಂಡರುಗಳು ಪತ್ರಕ್ಕೆ ಸಹಿಹಾಕಿದವರಲ್ಲಿ ಸೇರಿದ್ದಾರೆ.
ನಮ್ಮ ಫೆಲೆಸ್ತೀನ್ ಸಹದ್ಯೋಗಿಗಳ ಜೊತೆ ಅಂತಾರಾಷ್ಟ್ರೀಯ ಪತ್ರಿಕೋದ್ಯಮ ಸಮುದಾಯವು ಏಕತೆಯನ್ನು ಪ್ರದರ್ಶಿಸುವುದು ಮುಖ್ಯವಾಗಿದೆ ಎಂದು ಪತ್ರಕರ್ತರ ರಕ್ಷಣಾ ಸಮಿತಿಯ ಮುಖ್ಯ ನಿರ್ವಹಣಾಧಿಕಾ ಜೂಡಿ ಗಿನ್ಸ್ಬರ್ಗ್ ತಿಳಿಸಿದ್ದಾರೆ.