ಎಲ್ಲಾ ಹೈಕೋರ್ಟ್ಗಳಲ್ಲಿ ಖಾಯಂ ಹಸಿರುಪೀಠ ಸ್ಥಾಪನೆ ಕೋರಿ ಸಿಜೆಐಗೆ ಪತ್ರ
ಡಿ.ವೈ.ಚಂದ್ರಚೂಡ್ | PC : PTI
ಹೊಸದಿಲ್ಲಿ : ಪರಿಸರ ಸಂಬಂಧಿ ವಿಷಯಗಳನ್ನು ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿ ವಿಲೇವಾರಿ ಮಾಡಲು ದೇಶದ ಎಲ್ಲಾ ಹೈಕೋರ್ಟ್ಗಳಲ್ಲಿ ಖಾಯಂ ‘ಹಸಿರು ಪೀಠ’ಗಳನ್ನು ಸ್ಥಾಪಿಸಬೇಕೆಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ನ್ಯಾಯವಾದಿಯೊಬ್ಬರು ಶನಿವಾರ ಪತ್ರ ಬರೆದಿದ್ದಾರೆ.
ದೇಶವು ಹಿಂದೆಂದೂ ಇಂತಹ ಹವಾಮಾನ ವಿಕೋಪಗಳನ್ನು ಕಂಡಿರಲಿಲ್ಲ ಹಾಗೂ ಪರಿಸರದ ಮೇಲೆ ಅಗಾಧ ಪ್ರಮಾಣದ ದಾಳಿಗಳನ್ನು ಕಂಡಿರಲಿಲ್ಲ ಎಂದು ನ್ಯಾಯವಾದಿ ಹಾಗೂ ಪರಿಸರ ಹೋರಾಟಗಾರ ಆಕಾಶ್ ವಶಿಷ್ಠ ಅವರು ತಿಳಿಸಿದ್ದಾರೆ.
ವಿವಾದಗಳನ್ನು ಇತ್ಯರ್ಥಪಡಿಸುವಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ಅತ್ಯಂತ ಪರಿಣಾಮಕಾರಿ ಹಾಗೂ ಕಾರ್ಯಸಾಧಕ ವೇದಿಕೆಯಾಗಿದೆ. ಪಾರಿಸಾರಿಕ ನ್ಯಾಯವನ್ನು ಪೌರರಿಗೆ 2010ರ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕಾಯ್ದೆಯಲ್ಲಿ ಅಂತರ್ಗತವಾಗಿರುವ ಸೀಮಿತತೆಗಳು ಅತಿ ದೊಡ್ಡ ಅಡ್ಡಿಯಾಗಿದೆ ಎಂದವರು ಹೇಳಿದ್ದಾರೆ.
ಪರಿಸರ, ಹವಾಮಾನ ಬದಲಾವಣೆ, ಪರಿಸದ ಕುರಿತಾಗಿ ಖಾಯಂ, ಸಮರ್ಪಣಾತ್ಮಕ ಹಾಗೂ ದೃಢವಾದ ನಿರ್ಣಯವನ್ನು ಕೈಗೊಳ್ಳಲು ತ್ವರಿತವಾದ ಹಾಗೂ ಪರಿಣಾಮಕಾರಿ ಕಾರ್ಯತಂತ್ರವೊಂದನ್ನು ಸ್ಥಾಪಿಸುವುದು ಈಗಿನ ತುರ್ತು ಅವಶ್ಯಕತೆಯಾಗಿದೆ ಎಂದು ನ್ಯಾಯವಾದಿ ತಿಳಿಸಿದ್ದಾರೆ.
ಇದಕ್ಕಾಗಿ ಸುಪ್ರೀಂಕೋರ್ಟ್ನಲ್ಲಿರುವಂತೆ ದೇಶದ ಎಲ್ಲಾ 25 ನ್ಯಾಯಾಲಯಗಳಲ್ಲಿಯೂ ಖಾಯಂ ಹಸಿರು ನ್ಯಾಯಪೀಠಗಳನ್ನು ಸ್ಥಾಪಿಸಬೇಕಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.