ಆಸ್ಪತ್ರೆಯಲ್ಲಿ ಲಿಫ್ಟ್ ಕುಸಿತ: ಕೆಲ ಸಮಯದ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸಾವು
ಆಸ್ಪತ್ರೆಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಮಹಿಳೆಯ ಸಂಬಂಧಿಕರು
PC : NDTV
ಮೀರತ್ (ಉತ್ತರ ಪ್ರದೇಶ): ಆಸ್ಪತ್ರೆಯ ಲಿಫ್ಟ್ ಕುಸಿದಿದ್ದರಿಂದ, ಆಗಷ್ಟೇ ನವಜಾತ ಶಿಶುವಿಗೆ ಜನ್ಮ ನೀಡಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ ಉತ್ತರ ಪ್ರದೇಶದ ಮೀರತ್ ನಲ್ಲಿನ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಲೋಹಿಯಾ ನಗರದ ಕ್ಯಾಪಿಟಲ್ ಆಸ್ಪತ್ರೆಯಲ್ಲಿ ನಡೆದ ಈ ಘಟನೆಯಲ್ಲಿ ಮತ್ತಿಬ್ಬರು ವ್ಯಕ್ತಿಗಳೂ ಗಾಯಗೊಂಡಿದ್ದಾರೆ. ಈ ಘಟನೆಯ ಬೆನ್ನಿಗೇ ಆಸ್ಪತ್ರೆಯಲ್ಲಿ ಗದ್ದಲದ ವಾತಾವರಣವೇರ್ಪಟ್ಟು, ಮೃತ ಮಹಿಳೆಯ ಸಂಬಂಧಿಕರು ಪ್ರತಿಭಟನೆ ನಡೆಸಿದರು ಹಾಗೂ ಆಸ್ಪತ್ರೆಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು.
ಕರಿಶ್ಮಾ ಎಂಬ ಮಹಿಳೆಯ ಹೆರಿಗೆಯ ನಂತರ, ಆಕೆಯನ್ನು ನೆಲಮಹಡಿಯಲ್ಲಿರುವ ವಾರ್ಡ್ ಗೆ ಸ್ಥಳಾಂತರಗೊಳಿಸುವಾಗ ಈ ಘಟನೆ ನಡೆದಿದೆ. ಈ ವೇಳೆ, ಲಿಫ್ಟ್ ನಲ್ಲಿ ಮೃತ ಮಹಿಳೆಯೊಂದಿಗೆ ಇಬ್ಬರು ಆಸ್ಪತ್ರೆಯ ಸಿಬ್ಬಂದಿಗಳೂ ಇದ್ದರು. ಲಿಫ್ಟ್ ಕೆಳಗಿಳಿಯುವಾಗ ಅದರ ತಂತಿ ತುಂಡರಿಸಿ, ನೆಲಕ್ಕೆ ಅಪ್ಪಳಿಸಿದೆ. ಆಗ ಕರಿಶ್ಮಾ ತಲೆಗೆ ಹಾಗೂ ಕುತ್ತಿಗೆಗೆ ಗಂಭೀರ ಸ್ವರೂಪದ ಪೆಟ್ಟಾಗಿದೆ.
ಈ ಘಟನೆಯಲ್ಲಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯ ಸಿಬ್ಬಂದಿಗಳನ್ನು 45 ನಿಮಿಷಗಳ ನಂತರ, ಲಿಫ್ಟ್ ಬಾಗಿಲು ಮುರಿದು ರಕ್ಷಿಸಲಾಯಿತು. ಈ ಘಟನೆಯ ನಂತರ, ಆಸ್ಪತ್ರೆಯ ಸಿಬ್ಬಂದಿಗಳು ಸ್ಥಳದಿಂದ ಪರಾರಿಯಾದರು ಎಂದು ಮೃತ ಮಹಿಳೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಕರಿಶ್ಮಾರನ್ನು ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಕೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಮೃತ ಮಹಿಳೆಯ ಮಗು ಸುರಕ್ಷಿತವಾಗಿದ್ದು, ಅದನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ ಹಿರಿಯ ಪೊಲೀಸ್ ಅಧಿಕಾರಿ ಆಯುಷ್ ವಿಕ್ರಮ್, “ಸೂಕ್ತ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಕ್ರಮ ಕೈಗೊಳ್ಳಲಾಗುವುದು. ಸದ್ಯ, ಆಸ್ಪತ್ರೆಯ ಸಿಬ್ಬಂದಿಗಳು ತಲೆ ಮರೆಸಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.