ಕುಟುಂಬಿಕರು, ವಕೀಲರ ಕಾರಾಗೃಹ ಭೇಟಿಗೆ ಮಿತಿ : ಹೈಕೋರ್ಟ್ ತೀರ್ಪು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ : ಕಾರಾಗೃಹದಲ್ಲಿರುವ ಕೈದಿಗಳ ಸಂಖ್ಯೆಯನ್ನು ಪರಿಗಣಿಸಿ ಕೈದಿಗಳ ಕುಟುಂಬ, ಗೆಳೆಯರು ಹಾಗೂ ಕಾನೂನು ಸಲಹೆಗಾರರು ವಾರಕ್ಕೆ ಎರಡು ಬಾರಿ ಮಾತ್ರ ಕಾರಾಗೃಹ ಭೇಟಿ ನೀಡುವಂತೆ ಮಿತಿ ಹೇರಲು ನಿರ್ಧರಿಸಲಾಗಿದೆ. ಇದನ್ನು ಸಂಪೂರ್ಣ ಸ್ವೇಚ್ಛಾಚಾರ ಎಂದು ಹೇಳಲು ಸಾಧ್ಯವಿಲ್ಲ ಎಂದು ದಿಲ್ಲಿ ಉಚ್ಛ ನ್ಯಾಯಾಲಯ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.
ಉಚ್ಛ ನ್ಯಾಯಾಲಯದ ಆದೇಶ ಅದರ ನೀತಿ ನಿರ್ಧಾರವಾಗಿರುವುದರಿಂದ ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಬೇಳಾ ಎಂ. ತ್ರಿವೇದಿ ಹಾಗೂ ಪಂಕಜ್ ಮಿತ್ತಲ್ ಅವರು ಹೇಳಿದ್ದಾರೆ.
ಕಾರಾಗೃಹಗಳಲ್ಲಿ ಲಭ್ಯವಿರುವ ಸೌಲಭ್ಯಗಳು, ಸಿಬ್ಬಂದಿ ಹಾಗೂ ವಿಚಾರಣಾಧೀನ ಕೈದಿಗಳ ಸಂಖ್ಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಉಚ್ಛ ನ್ಯಾಯಾಲಯ ಕಳೆದ ವರ್ಷ ಫೆಬ್ರವರಿ 16 ರಂದು ನೀಡಿದ ತನ್ನ ಆದೇಶದಲ್ಲಿ ಹೇಳಿತ್ತು.
ದಿಲ್ಲಿ ಕಾರಾಗೃಹದ ನಿಯಮಗಳು, 2018ರ ನಿರ್ದಿಷ್ಟ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ವಿಲೇವಾರಿ ಮಾಡುವ ಸಂದರ್ಭ ಉಚ್ಛ ನ್ಯಾಯಾಲಯ ಈ ತೀರ್ಪು ನೀಡಿದೆ.
ಪ್ರತಿ ವಾರದಲ್ಲಿ ಸಂದರ್ಶನಕ್ಕೆ ಮಿತಿ ಹೇರದೆ ಇರುವುದರ ಜೊತೆಗೆ ಕಾನೂನು ಸಲಹೆಗಾರರೊಂದಿಗೆ ಸಂದರ್ಶನಗಳನ್ನು ಸೋಮವಾರದಿಂದ ಶುಕ್ರವಾರದ ವರೆಗೆ ಸೂಕ್ತ ನಿಗದಿಪಡಿಸಿದ ಸಮಯಕ್ಕೆ ಮುಕ್ತವಾಗಿ ಅನುಮತಿಸಲು ನಿಬಂಧನೆಗಳಲ್ಲಿ ತಿದ್ದುಪಡಿ ಮಾಡುವಂತೆ ಕೋರಿ ನ್ಯಾಯವಾದಿ ಜೈ ಅನಂತ್ ದೇಹದ್ರಾಯಿ ಅವರು ಅರ್ಜಿ ಸಲ್ಲಿಸಿದ್ದರು.
ದಿಲ್ಲಿ ಕಾರಾಗೃಹದಲ್ಲಿರುವ ತನ್ನ ಕಕ್ಷಿದಾರನಿಗೆ ಕಾನೂನು ಸಲಹೆಗಾರರನ್ನು ವಾರದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಭೇಟಿಯಾಗಲು ಅವಕಾಶ ನೀಡುವಂತೆ ಕೋರಿ ದೂರುದಾರರು ಅರ್ಜಿ ಸಲ್ಲಿಸಿದ್ದರು.