ಮೋದಿ ಸರಕಾರದಲ್ಲಿ 75 ಲಕ್ಷ ವಿದ್ಯಾರ್ಥಿಗಳ ಜೀವನ ನಾಶ: ಉವೈಸಿ
ನನ್ನ ಭಾಷಣ ಟಿಪ್ಪು ಸುಲ್ತಾನ್ ಗೆ ಸಮರ್ಪಣೆ ಎಂದ ಹೈದರಾಬಾದ್ ಸಂಸದ
ಅಸದುದ್ದೀನ್ ಉವೈಸಿ | PC : PTI
ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಮತ್ತೊಮ್ಮೆ ಸಂಸತ್ತಿನಲ್ಲಿ ಮೋದಿ ಸರಕಾರ ಹಾಗೂ ಸಂಘ ಪರಿವಾರದ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ ಅದರ ಜೊತೆಜೊತೆಗೆ ಕಾಂಗ್ರೆಸ್ ಅನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಮುಸಲ್ಮಾನರ ವಿರುದ್ಧ ದ್ವೇಷದಿಂದ ಗೆಲ್ಲುವುದಾದರೆ, ಮುಸಲ್ಮಾನರ ಸ್ವಯಂಘೋಷಿತ ಮಸೀಹಾಗಳು ಮುಸಲ್ಮಾನರ ಮತಗಳಿಂದ ಗೆದ್ದು ಮುಸಲ್ಮಾನರಿಗಾಗಿ ಏನು ಮಾಡಲ್ಲ ಎಂದು ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉವೈಸಿ ಮತ್ತೊಮ್ಮೆ ಸಂಸತ್ತಿನಲ್ಲಿ ತಮ್ಮ ಶಕ್ತಿಯುತ ಮತ್ತು ಪ್ರಭಾವಶಾಲಿ ಭಾಷಣದಿಂದ ಸುದ್ದಿಯಾಗಿದ್ದಾರೆ. ಆಡಳಿತರೂಢ ಪಕ್ಷ ಮತ್ತು ವಿಪಕ್ಷ ಒಕ್ಕೂಟ ಎರಡನ್ನೂ ಒಟ್ಟೊಟ್ಟಿಗೆ ತರಾಟೆಗೆ ತೆಗೆದುಕೊಳ್ಳುವ ಕೆಲವೇ ನಾಯಕರಲ್ಲೊರ್ವರು ಉವೈಸಿ.
ಉವೈಸಿ ತನ್ನ ಭಾಷಣದಲ್ಲಿ ಏನೇನು ಹೇಳಿದ್ದಾರೆ?
ರಾಷ್ಟ್ರಪತಿಗಳ ಭಾಷಣದ ವಂದನ ನಿರ್ಣಯದ ಬಗ್ಗೆ ಮಂಗಳವಾರ ಮಾತಾಡಲು ಎದ್ದು ನಿಂತ ಉವೈಸಿ ಅವರು "ಅವರನ್ನು ಎಲ್ಲರೂ ನೋಡುತ್ತಾರೆ, ಅವರ ಕುರಿತಾಗಿ ಎಲ್ಲರೂ ಮಾತಾಡ್ತಾರೆ, ಆದರೆ ಅವರೇನು ಹೇಳ್ತಾರೆ ಅಂತ ಯಾರೂ ಕೇಳಲ್ಲ, ಅಂತಹವರ ಕುರಿತಾಗಿ ಮಾತನಾಡಲಿದ್ದೇನೆ " ಎಂದು ಪ್ರಾರಂಭಿಸಿದರು.
ಯಾರ ಕುರಿತಾಗಿ ಪ್ರಧಾನಿ ಮೋದಿ ನುಸುಳುಕೋರ ಎಂದಿದ್ದರೊ, ಇವರು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಾರೆ ಎಂದು ಹೇಳಿದ್ದ ತಾಯಂದಿರು ಮತ್ತು ಸಹೋದರಿಯರ ಕುರಿತು, ಗುಂಪು ಹತ್ಯೆಯಿಂದ ಕೊಲ್ಲಲ್ಪಡುವ ಯುವಕರ ಕುರಿತಾಗಿ, ಆಡಳಿತದ ಕಠೋರ ಕಾನೂನುಗಳ ಕಾರಣದಿಂದಾಗಿ ಯಾರ ಮಕ್ಕಳು ಜೈಲಿನಲ್ಲಿದ್ದಾರೋ ಅವರ ಪರವಾಗಿ ನಾನು ಮಾತಾಡುತ್ತೇನೆ ಎಂದು ಉವೈಸಿ ಹೇಳಿದರು.
ಇದರ ನಂತರ ಸರಕಾರದತ್ತ ತಮ್ಮ ವಾಗ್ದಾಳಿಯನ್ನು ನಿಲ್ಲಿಸಿ ವಿಪಕ್ಷದ ಕಡೆಗೆ ವಾಗ್ದಾಳಿ ಪ್ರಾರಂಭಿಸಿದ ಉವೈಸಿ, ಮುಸಲ್ಮಾನರ ಸ್ವಯಂಘೋಷಿತ ಮಸಿಹಾಗಳು ಮುಸಲ್ಮಾನರ ಮತ ಪಡೆದು ಗೆಲ್ಲುತ್ತಾರೆ, ಆದರೆ ಅವರಿಗಾಗಿ ಲೋಕಸಭೆಯ ಟಿಕೆಟ್ ಕೊಡಲ್ಲ. ಕೇವಲ ನಾಲ್ಕು ಶೇಕಡದಷ್ಟು ಮುಸಲ್ಮಾನರು ಮಾತ್ರ ಗೆದ್ದು ಬಂದಿದ್ದಾರೆ ಎಂದು ವಿಪಕ್ಷವನ್ನೂ ಉವೈಸಿ ತರಾಟೆಗೆ ತೆಗೆದುಕೊಂಡರು .
ಸಂವಿಧಾನ ಕೇವಲ ಚುಂಬಿಸುವ ಪುಸ್ತಕ ಅಲ್ಲ ಎಂದ ಉವೈಸಿ, ಸಂವಿಧಾನ ನಮ್ಮ ದೇಶದ ನಿರ್ಮಾತೃಗಳ ಕನಸಾಗಿತ್ತು ಎಂದರು. ನಮ್ಮ ದೇಶದ ಪ್ರಜಾಪ್ರಭುತ್ವ ಯಾವ ರೀತಿಯಲ್ಲಿ ನಡೆಯಬೇಕು ಎಂಬುದಕ್ಕೆ ರೂಪುರೇಷೆ ಅದು ಎಂದೂ ನೆನಪಿಸಿದರು. ದೇಶವನ್ನು ನಡೆಸುವಲ್ಲಿ ಎಲ್ಲಾ ಸಮುದಾಯಗಳ ಪಾತ್ರವಿರಬೇಕು ಎಂಬ ಕನಸು ಸಂವಿಧಾನ ಎಂದ ಉವೈಸಿ ಲೋಕಸಭೆಯಲ್ಲಿ ಕೇವಲ ನಾಲ್ಕು ಶೇಖಡಾ ಮುಸಲ್ಮಾನರು ಚುನಾಯಿತರಾಗಿ ಬರುತ್ತಾರೆ ಎಂಬುದನ್ನು ಒತ್ತಿ ಹೇಳಿದರು.
ಮೊಹಬ್ಬತ್ತಿನ ಕುರಿತು ಮಾತನಾಡುವವರಲ್ಲಿ ನಾನು ಹೇಳ ಬಯಸುವುದೇನೆಂದರೆ ನೀವು ಈ ದೇಶದ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಸಂವಾದಗಳನ್ನು ಎತ್ತಿ ಓದಿ ನೋಡಿ. ಜಾತ್ಯತೀತತೆ ಕುರಿತಾಗಿ ಸರ್ದಾರ್ ಹುಕುಂ ಸಿಂಗ್, ಪಂಡಿತ್ ನೆಹರೂ, ಎಚ್ ಸಿ ಮುಖರ್ಜಿ ಯಂತಹ ನಾಯಕರು ಏನು ಹೇಳಿದ್ದರು ಎಂಬುದನ್ನು ಒಮ್ಮೆ ಓದಿ ನೋಡಿ ಎಂದು ಹೇಳಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದರು.
"ಬಿಜೆಪಿಯು ನನ್ನನ್ನು ಮಾಯ ಮಾಡಿಬಿಡಲು ಪ್ರಯತ್ನಿಸುತ್ತಿದ್ದರೆ, ಇನ್ನೂ ಕೆಲವು ಪಕ್ಷಗಳಿಗೆ ನನ್ನ ಅಸ್ತಿತ್ವ ಕೇವಲ ಮತ ಚಲಾಯಿಸುವಷ್ಟಕ್ಕೆ ಮಾತ್ರ" ಎಂದು ಮುಸ್ಲಿಮರ ಬಗ್ಗೆ ರಾಜಕೀಯ ಪಕ್ಷಗಳ ಧೋರಣೆಯನ್ನು ಉಲ್ಲೇಖಿಸಿ ಉವೈಸಿ ಕಿಡಿಕಾರಿದರು.
ಇದೇನಾ ಸಾಮಾಜಿಕ ನ್ಯಾಯ ಎಂದು ಪ್ರಶ್ನಿಸಿದ ಉವೈಸಿ, ಲೋಕಸಭೆಯಲ್ಲಿ ಈಗ ಓಬಿಸಿ ಸಂಸದರು ಮೇಲ್ಜಾತಿಯ ಸಂಸದರಷ್ಟೇ ಇದ್ದಾರೆ. ಆದರೆ 14% ಇರುವ ಮುಸಲ್ಮಾನರು ಕೇವಲ ನಾಲ್ಕು ಶೇಕಡವಿದ್ದಾರೆ ಎಂಬುದರ ಕಡೆ ಎಲ್ಲರ ಗಮನ ಸೆಳೆದರು.
ನಂತರ ಮತ್ತೊಮ್ಮೆ ಆಡಳಿತ ಪಕ್ಷದ ಕಡೆ ವಾಗ್ದಾಳಿ ತಿರುಗಿಸಿದ ಉವೈಸಿ " ಗುಂಪು ಹತ್ಯೆ ಮತ್ತು ಮಧ್ಯಪ್ರದೇಶದಲ್ಲಿ ಯಾವ ರೀತಿಯಲ್ಲಿ ಮುಸಲ್ಮಾನರ ಮನೆಗಳನ್ನು ಬುಲ್ಡೋಸ್ ಮಾಡಲಾಯಿತು " ಎಂಬ ಬಗ್ಗೆ ಮಾತನಾಡಿದರು.
ನರೇಂದ್ರ ಮೋದಿಯವರಿಗೆ ಸಿಕ್ಕಿರುವಂತಹ ಜನಾದೇಶ ಕೇವಲ ಮುಸಲ್ಮಾನರ ಮೇಲಿರುವ ದ್ವೇಷದ ಕಾರಣದಿಂದ ಬಂದಿದೆ ಎಂದು ಉವೈಸಿ ಒತ್ತಿ ಹೇಳಿದರು.
ನಿರುದ್ಯೋಗ ಕುರಿತು ಮಾತನಾಡಿದ ಉವೈಸಿ "ಮೋದಿ ಸರಕಾರದ ಆಡಳಿತದಲ್ಲಿ 75 ಲಕ್ಷ ವಿದ್ಯಾರ್ಥಿಗಳ ಜೀವನ ನಾಶವಾಗಿದೆ" ಎಂದರು.
ನಿರುದ್ಯೋಗದ ಕಾರಣದಿಂದಾಗಿ ಯುದ್ಧಗ್ರಸ್ತ ರಷ್ಯಾಕ್ಕೆ ಹೋಗಿ ನಮ್ಮ ಯುವಕರು ಸಾವನ್ನಪ್ಪಿದ್ದಾರೆ. ಇಸ್ರೇಲ್ ಗೆ ಹೋಗಿ ಉದ್ಯೋಗ ಪಡೆಯುವುದಕ್ಕೆ ಭಾರತದಲ್ಲಿ ಕ್ಯಾಂಪ್ ಗಳು ನಡೆಸಲಾಗುತ್ತಿದೆ. ಮತ್ತೆ ಫೆಲಸ್ತೀನ್ ಬಗ್ಗೆ ಮಾತನಾಡಿದ ಉವೈಸಿ ಮೋದಿ ಸರಕಾರದ ವಿದೇಶಾಂಗ ನೀತಿಯನ್ನು ಪ್ರಶ್ನಿಸಿದರು. ಇಸ್ರೇಲ್ ಗೆ ಭಾರತದಿಂದ ನೀಡುತ್ತಿರುವ ಶಸ್ತ್ರಗಳ ಕುರಿತು ಅವರು ಪ್ರಶ್ನಿಸಿದರು. ಯಾಕೆ ಅಲ್ಪಸಂಖ್ಯಾತರ ಸ್ಕಾಲರ್ಶಿಪ್ ಪ್ರಮಾಣವನ್ನು ಕಡಿತಗೊಳಿಸಲಾಗಿದೆ ಎಂದು ಉವೈಸಿ ಪ್ರಶ್ನಿಸಿದರು.
ಅಮೆರಿಕದಲ್ಲಿ ಪನ್ನುನ್ ಹತ್ಯೆ ಯತ್ನದ ಆರೋಪಿಯಾಗಿರುವ ನಿಖಿಲ್ ಗುಪ್ತ ಕುರಿತೂ ಉವೈಸಿ ಮಾತನಾಡಿದರು. ನಿಖಿಲ್ ಗುಪ್ತನನ್ನು ಭಾರತ ಕಳುಹಿಸಿದ್ದು ಹೌದೋ ಅಲ್ವೋ ಎಂದೂ ಪ್ರಶ್ನಿಸಿದರು.
ನಾನು ನನ್ನ ಈ ಭಾಷಣವನ್ನು ಟಿಪ್ಪು ಸುಲ್ತಾನ್ ಗೆ ಅರ್ಪಿಸುತ್ತೇನೆ ಎಂದ ಉವೈಸಿ " ನೀವೇನು ಟಿಪ್ಪು ಸುಲ್ತಾನ್ ನನ್ನ ದ್ವೇಷಿಸುತ್ತಿರೋ ಎಂದು ಪ್ರಶ್ನಿಸಿದರು. ಸಂವಿಧಾನದಲ್ಲಿ ಟಿಪ್ಪು ಸುಲ್ತಾನನ ಚಿತ್ರ ಇದೆ ಮತ್ತು ಸರ್ದಾರ್ ಪಟೇಲ್, ಶಾಮ ಪ್ರಸಾದ್ ಮುಖರ್ಜಿ ಅವರು ಅದರಲ್ಲಿ ಸಹಿ ಮಾಡಿದ್ದಾರೆ" ಎಂದರು.