ವಿಚಾರಣಾಧೀನ ಕೈದಿಗಳಿಗೆ ಜೈಲುಗಳಲ್ಲ, ಪ್ರತ್ಯೇಕ ಬಂಧನ ಕೇಂದ್ರ ನೀಡಿ: ಸಂಸದೀಯ ಸಮಿತಿ ಶಿಫಾರಸು

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ವಿಚಾರಣಾಧೀನ ಕೈದಿಗಳನ್ನು ಪ್ರತ್ಯೇಕವಾದ ಬಂಧನ ಕೇಂದ್ರಗಳಲ್ಲಿರಿಸಬೇಕು. ಇವುಗಳನ್ನು ಜೈಲು ಎಂಬುದಾಗಿ ಕರೆಯಬಾರದು ಎಂದು ಗೃಹ ಸಚಿವಾಲಯ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ‘ಅನುದಾನಗಳ ಬೇಡಿಕೆ’ (2025–26) ಕುರಿತ ವರದಿಯಲ್ಲಿ ಶಿಫಾರಸು ಮಾಡಿದೆ.
ಸಮಿತಿಯು ಕಠಿಣ ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳೊಂದಿಗೆ ವಿಚಾರಣಾಧೀನ ಕೈದಿಗಳಿಗೆ ಸೆರೆವಾಸ ವಿಧಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಬಿಜೆಪಿಯ ಸಂಸದ ರಾಧಾಮೋಹನ್ ದಾಸ ಅಗ್ರವಾಲ್ ನೇತೃತ್ವದ ಸ್ಥಾಯಿ ಸಮಿತಿಯು ಬಂಧನ ಕೇಂದ್ರ ಕುರಿತ ಹಲವು ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಚಿವಾಲಯಕ್ಕೆ ಈವಾರ ಸಲ್ಲಿಸಿದೆ. ಈ ಶಿಫಾರಸ್ಸುಗಳು ದೇಶದ ಜೈಲುಗಳಲ್ಲಿನ ಸುಧಾರಣೆಯ ಮೇಲೆ ಕೇಂದ್ರೀಕೃತವಾಗಿದೆ.
‘ಘೋರ ಅಪರಾಧಗಳನ್ನು ಎಸಗಿ, ಶಿಕ್ಷೆ ಅನುಭವಿಸುತ್ತಿರುವವರನ್ನು ಇರಿಸಿರುವ ಜೈಲಿನಲ್ಲಿಯೇ ವಿಚಾರಣಾಧೀನ ಕೈದಿಗಳನ್ನು ಇರಿಸುವುದರಿಂದ ವಿಚಾರಣಾಧೀನ ಕೈದಿಗಳು ತೀವ್ರ ಸ್ವರೂಪದ ಅಪರಾಧಿಗಳ ಪ್ರಭಾವಕ್ಕೆ ಒಳಗಾಗಬಹುದು. ಆ ಮೂಲಕ ಅವರೂ ಘೋರ ಅಪರಾಧಿಗಳಾಗಬಹುದು. ಇದನ್ನು ತಡೆಯುವುದು ಅಗತ್ಯ’, ಎಂದು ಸ್ಥಾಯಿ ಸಮಿತಿ ನೀಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದೇಶದಲ್ಲಿ ಜೈಲುಗಳಲ್ಲಿರುವ ಕೈದಿಗಳ ಪೈಕಿ ವಿಚಾರಣಾಧೀನ ಕೈದಿಗಳ ಸಂಖ್ಯೆ ಶೇ. 75ರಷ್ಟಿದೆ. ಅವರ ವಿರುದ್ಧ ಪ್ರಕರಣಗಳು ದೀರ್ಘಕಾಲದಿಂದಲೂ ಬಾಕಿಯಿವೆ. ಅನೇಕ ಪ್ರಕರಣಗಳಲ್ಲಿ ದೀರ್ಘ ಕಾಲದ ಸೆರೆವಾಸ ಅನುಭವಿಸಿದ ನಂತರ ವಿಚಾರಣಾಧೀನ ಕೈದಿಗಳು ಖುಲಾಸೆಗೊಂಡಿರುವ ನಿದರ್ಶನಗಳಿವೆ ಎಂಬುದರ ಕುರಿತು ಸಮಿತಿಯು ಕಳವಳ ವ್ಯಕ್ತಪಡಿಸಿದೆ.
ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳು ಹಾಗೂ ವಿಚಾರಣಾಧೀನ ಕೈದಿಗಳು ಜೈಲುಗಳಲ್ಲಿ ಒಟ್ಟಿಗೆ ಇರುವುದು ಸರಿಯಲ್ಲ. ಸಣ್ಣಪುಟ್ಟ ಅಪರಾಧ ಎಸಗಿರುವ ವಿಚಾರಣಾಧೀನ ಕೈದಿಗಳು ನಂತರ ಘೋರ ಕೃತ್ಯಗಳನ್ನು ಎಸಗುವುದಕ್ಕೆ ತರಬೇತಿ ನೀಡಿ ಪೋಷಿಸುವ ಕೇಂದ್ರಗಳಾಗಿ ಜೈಲುಗಳು ಪರಿವರ್ತನೆಗೊಳ್ಳುತ್ತಿವೆ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.
ಕಠಿಣ ಶಿಕ್ಷೆಗೆ ಗುರಿಯಾಗಿ ಸೆರೆವಾಸ ಅನುಭವಿಸುತ್ತಿರುವ ಅಪರಾಧಿಗಳಿಗೂ ಹಾಗೂ ಜೈಲುಗಳಲ್ಲಿ ಇರುವ ವಿಚಾರಣಾಧೀನ ಕೈದಿಗಳಿಗೂ ಸಂಬಂಧಿಸಿದ ನಿಯಮಗಳಲ್ಲಿ ಅಂತಹ ವ್ಯತ್ಯಾಸ ಇರದಿರುವುದು ಇದಕ್ಕೆ ಕಾರಣ ಎಂದು ವರದಿಯು ಬೆಟ್ಟು ಮಾಡಿದೆ.
ವಿಚಾರಣಾಧೀನ ಕೈದಿಗಳು ಖುಲಾಸೆಗೊಂಡ ಬಳಿಕ ʼಜೈಲಿನಲ್ಲಿ ಇದ್ದು ಬಂದವ’ ಎಂಬ ಕಳಂಕ ಹೊರಬೇಕಾಗುತ್ತದೆ. ಇದನ್ನು ತಪ್ಪಿಸಲು ವಿಚಾರಣಾಧೀನ ಕೈದಿಗಳಿಗಾಗಿ ಪ್ರತ್ಯೇಕ ‘ಬಂಧನ ಕೇಂದ್ರ’ಗಳನ್ನು ಸ್ಥಾಪಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
‘2016ರ ಮಾದರಿ ಬಂದೀಖಾನೆ ಕೈಪಿಡಿ’ ಹಾಗೂ ‘ಮಾದರಿ ಬಂದೀಖಾನೆಗಳು ಹಾಗೂ ಪರಿಹಾರಾತ್ಮಕ ಸೇವೆಗಳ ಕಾಯ್ದೆ’ ಯಂತೆ ವಿಚಾರಣಾಧೀನ ಕೈದಿಗಳು ಹಾಗೂ ಶಿಕ್ಷೆಗೆ ಗುರಿಯಾದ ಅಪರಾಧಿಗಳನ್ನು ಪ್ರತ್ಯೇಕವಾಗಿಯೇ ಇರಿಸಲಾಗುತ್ತದೆ ಎಂದು ಗೃಹ ಸಚಿವಾಲಯವು ತಿಳಿಸಿದೆ.
‘ಸಂವಿಧಾನದ ಪ್ರಕಾರ, ಜೈಲುಗಳ ನಿರ್ವಹಣೆಯು ರಾಜ್ಯಗಳ ವಿಚಾರ. ಸಮಿತಿ ನೀಡಿರುವ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದಾಗಿದೆ’ ಎಂದು ಗೃಹ ಸಚಿವಾಲಯವು ಸ್ಪಷ್ಟಪಡಿಸಿದೆ.
ಕೃಪೆ: deccanherald.com