ಲೋಕಸಭೆಯಲ್ಲಿ ವಲಸೆ ಮಸೂದೆ ಮಂಡನೆ: ಜೆಪಿಸಿಗೆ ಉಲ್ಲೇಖಿಸುವಂತೆ ಪ್ರತಿಪಕ್ಷ ಆಗ್ರಹ

ನಿತ್ಯಾನಂದ ರಾಯ್ | PTI
ಹೊಸದಿಲ್ಲಿ: ಭಾರತಕ್ಕೆ ವಿದೇಶಿ ಪ್ರಜೆಗಳ ಪ್ರವೇಶ,ನಿರ್ಗಮನ ಮತ್ತು ವಾಸ್ತವ್ಯ ಸೇರಿದಂತೆ ವಲಸೆ ಮತ್ತು ವಿದೇಶಿಯರಿಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಸುಗಮಗೊಳಿಸಲು ಉದ್ದೇಶಿಸಿರುವ ವಲಸೆ ಮತ್ತು ವಿದೇಶಿಯರ ಮಸೂದೆ,2025ನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾಗಿದ್ದು,ಇದು ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆ ಎಂದು ಬಣ್ಣಿಸಿರುವ ಪ್ರತಿಪಕ್ಷಗಳು ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ಉಲ್ಲೇಖಿಸುವಂತೆ ಆಗ್ರಹಿಸಿವೆ.
ಮಸೂದೆಯನ್ನು ಸದನದಲ್ಲಿ ಮಂಡಿಸಿದ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು,ಮಸೂದೆಯನ್ನು ಸದನದಲ್ಲಿ ಮಂಡಿಸಲು ಸರಕಾರಕ್ಕೆ ಶಾಸನಾತ್ಮಕ ಅಧಿಕಾರವಿಲ್ಲ ಎಂಬ ಪ್ರತಿಪಕ್ಷಗಳ ಅಭಿಪ್ರಾಯವನ್ನು ತಿರಸ್ಕರಿಸಿದರು. ಪ್ರವಾಸಿಗಳಿಗೆ ಭಾರತಕ್ಕೆ ಆಗಮಿಸಲು ಸ್ವಾಗತವಿದೆಯಾದರೂ,ಶಾಂತಿ ಮತ್ತು ದೇಶದ ಸಾರ್ವಭೌಮತೆಯನ್ನು ಕಾಯ್ದಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿದೆ ಮತ್ತು ಪ್ರವಾಸಿಗಳು ಭಾರತದ ವಲಸೆ ಸಂಬಂಧಿತ ಕಾನೂನನ್ನು ಅನುಸರಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಮಸೂದೆಯನ್ನು ಮಂಡಿಸುವ ಮುನ್ನ ರಾಯ್,ಪ್ರಸ್ತಾವಿತ ಕಾನೂನು ದೇಶದಲ್ಲಿ ವಲಸೆ ಮತ್ತು ವಿದೇಶಿಯರನ್ನು ನಿಯಂತ್ರಿಸುವ ಪ್ರಸ್ತುತ ಕಾಯ್ದೆಗಳಲ್ಲಿಯ ಪರಸ್ಪರ ಅತಿಕ್ರಮಿಸುವ ಮತ್ತು ಪುನರಾವರ್ತಿತ ನಿಬಂಧನೆಗಳನ್ನು ಸರಿಪಡಿಸಲು ಬಯಸಿದೆ ಎಂದು ತಿಳಿಸಿದರು.
ಭಾರತವನ್ನು ಪ್ರವೇಶಿಸುವ ಅಥವಾ ಭಾರತದಿಂದ ನಿರ್ಗಮಿಸುವ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಪಾಸ್ಪೋರ್ಟ್ ಮತ್ತು ಇತರ ಪ್ರಯಾಣ ದಾಖಲೆಗಳನ್ನು ಅಗತ್ಯವಾಗಿಸಲು,ವೀಸಾ ಮತ್ತು ನೋಂದಣಿ ಅಗತ್ಯ ಸೇರಿದಂತೆ ವಿದೇಶಿಯರಿಗೆ ಸಂಬಂಧಿಸಿದ ವಿಷಯಗಳನ್ನು ನಿಯಂತ್ರಿಸಲು ಮತ್ತು ಸಾಂದರ್ಭಿಕವಾಗಿ ಅನ್ವಯಗೊಳ್ಳುವ ವಿಷಯಗಳಲ್ಲಿ ಕೇಂದ್ರ ಸರಕಾರಕ್ಕೆ ಕೆಲವು ಅಧಿಕಾರಗಳನ್ನು ನೀಡುವ ಉದ್ದೇಶವನ್ನು ಮಸೂದೆಯು ಹೊಂದಿದೆ ಎಂದು ರಾಯ್ ಹೇಳಿದರು.
ಮಂಡನೆ ಹಂತದಲ್ಲಿ ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್ ಸಂಸದ ಮನೀಷ ತಿವಾರಿಯವರು,ಮಸೂದೆಯು ಹಲವಾರು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಮತ್ತು ಅಧಿಕಾರದಲ್ಲಿರುವ ಆಡಳಿತ ವ್ಯವಸ್ಥೆಯ ಸಿದ್ಧಾಂತವನ್ನು ಒಪ್ಪದವರಿಗೆ ದೇಶದೊಳಗೆ ಪ್ರವೇಶವನ್ನು ನಿರಾಕರಿಸಲು ಪ್ರಸ್ತಾವಿತ ಕಾನೂನಿನ ನಿಬಂಧನೆಗಳನ್ನು ಸರಕಾರವು ಬಳಸಿಕೊಳ್ಳಬಹುದು ಎಂದು ಹೇಳಿದರು.
ಮಸೂದೆಯಲ್ಲಿನ ಒಂದು ನಿಬಂಧನೆಯು ವಲಸೆ ಅಧಿಕಾರಿಯ ನಿರ್ಧಾರದ ವಿರುದ್ಧ ಮೇಲ್ಮನವಿಗೆ ಕಾರ್ಯವಿಧಾನವನ್ನು ಒದಗಿಸಲು ವಿಫಲವಾಗಿದ್ದು,ಇದು ಮೂಲಭೂತ ಹಕ್ಕನ್ನು ಮತ್ತು ನ್ಯಾಯಶಾಸ್ತ್ರದಲ್ಲಿನ ನೈಸರ್ಗಿಕ ನ್ಯಾಯದ ಮೂಲಭೂತ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಪಾದಿಸಿದ ತಿವಾರಿ,ಮಸೂದೆಯು ಸಂವಿಧಾನದಡಿ ಮೂಲಭೂತ ಹಕ್ಕುಗಳ ಹಲವಾರು ವಿಧಿಗಳನ್ನು ಉಲ್ಲಂಘಿಸುವುದರಿಂದ ಅದನ್ನು ಹಿಂದೆಗೆದುಕೊಳ್ಳಬೇಕು ಅಥವಾ ಕೂಲಕಂಶ ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿಗೆ ಉಲ್ಲೇಖಿಸಬೇಕು ಎಂದು ಆಗ್ರಹಿಸಿದರು.
ತಿವಾರಿಯವರ ಜೊತೆ ಧ್ವನಿಗೂಡಿಸಿದ ಟಿಎಂಸಿ ಸಂಸದ ಸೌಗತ ರಾಯ್,ಅವರು ದೇಶದಲ್ಲಿ ವಿದೇಶಿಯರ ಪ್ರವೇಶ ಮತ್ತು ನಿರ್ಗಮನಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಕಾಯ್ದೆಗಳಿವೆ ಮತ್ತು ಈ ಕಾಯ್ದೆಗಳು ಈವರೆಗೆ ಪರಿಣಾಮಕಾರಿಯಾಗಿ ಕಾರ್ಯವನ್ನು ನಿರ್ವಹಿಸಿವೆ,ಹೀಗಾಗಿ ಅವುಗಳ ಸ್ಥಾನದಲ್ಲಿ ಪ್ರಸ್ತಾವಿತ ಕಾನೂನು ಅನಗತ್ಯವಾಗಿದೆ ಎಂದು ಹೇಳಿದರು.
ತಿವಾರಿ ಮತ್ತು ರಾಯ್ ಎತ್ತಿದ ಆಕ್ಷೇಪಗಳನ್ನು ತಿರಸ್ಕರಿಸಿದ ಸಚಿವರು,ಮಸೂದೆಯ ಮಂಡನೆಯು ಸದನದ ಶಾಸನಾತ್ಮಕ ಅಧಿಕಾರದ ವ್ಯಾಪ್ತಿಯಲ್ಲಿದೆ ಎಂದು ಹೇಳಿದರು.