100 ವರ್ಷದಷ್ಟು ಹಳೆಯದಾದ ಬಾಯ್ಲರ್ ಕಾಯ್ದೆಯ ಬದಲಿ ಮಸೂದೆಗೆ ಲೋಕಸಭೆ ಅಸ್ತು

ಸಾಂದರ್ಭಿಕ ಚಿತ್ರ (Photo: PTI)
ಹೊಸದಿಲ್ಲಿ: ಸ್ಟೀಮ್ ಬಾಯ್ಲರ್ ಗಳ ಸ್ಫೋಟದಿಂದ ಜನರ ಆಸ್ತಿಪಾಸ್ತಿಗಳಿಗೆ ಆಗುವ ಅಪಾಯಗಳಿಂದ ರಕ್ಷಿಸುವ, ಜೀವ ಸುರಕ್ಷತೆಯನ್ನು ಖಾತರಿಪಡಿಸುವ ಹಾಗೂ ಸ್ಟೀಮ್ ಬಾಯ್ಲರ್ ಗಳ ನೋಂದಣಿಯಲ್ಲಿ ಏಕರೂಪತೆಯನ್ನು ತರುವ ಉದ್ದೇಶ ಹೊಂದಿರುವ ಬಾಯ್ಲರ್ ನಿಯಂತ್ರಣ ಮಸೂದೆಗೆ ಮಂಗಳವಾರ ಲೋಕಸಭೆ ಅನುಮೋದನೆ ನೀಡಿತು.
ಒಂದು ಶತಮಾನದಷ್ಟು ಹಳೆಯದಾದ 1923ರ ಬಾಯ್ಲರ್ ಕಾಯ್ದೆಯನ್ನು ರದ್ದುಗೊಳಿಸುವ ಉದ್ದೇಶವನ್ನು ಬಾಯ್ಲರ್ ಮಸೂದೆ, 2024 ಹೊಂದಿದೆ.
ಈ ಮಸೂದೆಗೆ ಕಳೆದ ವರ್ಷ ರಾಜ್ಯಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು.
ಏಳು ಅಪರಾಧಗಳನ್ನು ಅಪರಾಧಮುಕ್ತಗೊಳಿಸುವ ಹಾಗೂ ವ್ಯಾಪಾರವನ್ನು ಸುಗಮಗೊಳಿಸುವ ಗುರಿ ಹೊಂದಿರುವ ಈ ಮಸೂದೆಯನ್ನು ಮಂಗಳವಾರ ಲೋಕಸಭೆಯಲ್ಲಿ ಧ್ವನಿಮತದೊಂದಿಗೆ ಅಂಗೀಕರಿಸಲಾಯಿತು.
ಬಾಯ್ಲರ್ ಒಳಗೆ ಕೆಲಸ ನಿರ್ವಹಿಸುವ ವ್ಯಕ್ತಿಯ ಸುರಕ್ಷತೆಯನ್ನು ಖಾತರಿಗೊಳಿಸುವ ನಿಯಮವನ್ನು ಈ ಮಸೂದೆ ಒಳಗೊಂಡಿದೆ. ಇದರೊಂದಿಗೆ, ಬಾಯ್ಲರ್ ರಿಪೇರಿಗಳನ್ನು ಪ್ರಮಾಣೀಕೃತ ಹಾಗೂ ಸಂಬಂಧಿತ ವ್ಯಕ್ತಿಗಳೇ ಕೈಗೊಳ್ಳಬೇಕು ಎಂಬ ನಿಯಮವನ್ನೂ ಈ ಮಸೂದೆಯಲ್ಲಿ ವಿಧಿಸಲಾಗಿದೆ.