ಲೋಕಸಭಾ ಚುನಾವಣೆ | 4,650 ಕೋಟಿ ರೂ. ಮೌಲ್ಯದ ನಗದು, ಮಾದಕ ದ್ರವ್ಯ, ಆಮಿಷವೊಡ್ಡುವ ವಸ್ತುಗಳ ವಶ!
75 ವರ್ಷಗಳ ಇತಿಹಾಸದಲ್ಲೇ ಗರಿಷ್ಠ: ಚುನಾವಣಾ ಆಯೋಗ
PC : PTI
ಹೊಸದಿಲ್ಲಿ: ದೇಶದಲ್ಲಿ ಲೋಕಸಭಾ ಚುನಾವಣೆಗಳ 75 ವರ್ಷಗಳ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ಆಮಿಶವೊಡ್ಡುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಸೋಮವಾರ ತಿಳಿಸಿದೆ.
ಹಣ ಬಲದ ವಿರುದ್ಧ ಚುನಾವಣಾ ಆಯೋಗವು ದಿಟ್ಟ ಹೋರಾಟದಲ್ಲಿ ತೊಡಗಿದ್ದು, ಪ್ರಸಕ್ತ ಚುನಾವಣೆಯಲ್ಲಿ ಮೊಲದ ಹಂತದ ಮತದಾನ ನಡೆಯುವ ಮೊದಲೇ 4,650 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹಣ ಮತ್ತು ವಸ್ತುಗಳನ್ನು ಕಾನೂನು ಅನುಷ್ಠಾನ ಸಂಸ್ಥೆಗಳು ವಶಪಡಿಸಿಕೊಂಡಿವೆ ಎಂದು ಭಾರತೀಯ ಚುನಾವಣಾ ಆಯೋಗದ ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
2019ರ ಇಡೀ ಲೋಕಸಭಾ ಚುನಾವಣೆಯ ಅವಧಿಯಲ್ಲಿ 3,475 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಹಣ ವಶಪಡಿಸಿಕೊಳ್ಳಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ವಶಪಡಿಸಿಕೊಂಡ ಆಮಿಷ ವಸ್ತುಗಳ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.
ವಶಪಡಿಸಿಕೊಂಡ ವಸ್ತುಗಳ ಪೈಕಿ 45 ಶೇಕಡ (ಸುಮಾರು 2,068 ಕೋಟಿ ರೂ. ಮೌಲ್ಯ) ಮಾದಕ ದ್ರವ್ಯವಾಗಿರುವುದು ಗಮನಾರ್ಹವಾಗಿದೆ.
ಮಾದಕ ದ್ರವ್ಯವನ್ನು ಹೊರತುಪಡಿಸಿದರೆ, ಚುನಾವಣಾ ಆಯೋಗದ ತಂಡಗಳು 395.39 ಕೋಟಿ ರೂ. ನಗದು, 489.31 ಕೋಟಿ ರೂ. ಮೌಲ್ಯದ ಮದ್ಯ, 562.10 ಕೋಟಿ ರೂ. ಮೌಲ್ಯದ ಬೆಲೆಬಾಳುವ ಲೋಹಗಳು ಹಾಗೂ 1,142.49 ಕೋಟಿ ರೂ. ಮೌಲ್ಯದ ಇತರ ವಸ್ತುಗಳನ್ನು ವಶಪಡಿಸಿಕೊಂಡಿವೆ.
‘‘ವಶಪಡಿಸಿಕೊಳ್ಳಲಾಗಿರುವ ವಸ್ತುಗಳ ಪ್ರಮಾಣವು, ಆಮಿಶ ಮತ್ತು ಅವ್ಯವಹಾರ ರಹಿತ ಚುನಾವಣೆ ನಡೆಸುವ ಚುನಾವಣಾ ಆಯೋಗದ ಬದ್ಧತೆಯನ್ನು ಹೇಳುತ್ತದೆ. ಪಕ್ಷಗಳಿಗೆ, ಅದರಲ್ಲೂ ಮುಖ್ಯವಾಗಿ ಸಂಪನ್ಮೂಲಗಳ ಕೊರತೆಯಿರುವ ಸಣ್ಣ ಪಕ್ಷಗಳಿಗೆ ‘ಸಮಾನ ಅವಕಾಶ’ ಒದಗಿಸುವ ದೃಷ್ಟಿಯಿಂದ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’’ ಎಂದು ಭಾರತೀಯ ಚುನಾವಣಾ ಆಯೋಗದ ಜಂಟಿ ನಿರ್ದೇಶಕ ಅನೂಜ್ ಚಂದಕ್ ಅಧಿಕೃತ ಹೇಳಿಕೆಯೊಂದರಲ್ಲಿ ಹೇಳಿಕೊಂಡಿದ್ದಾರೆ.
‘‘ರಾಜ್ಯವೊಂದರ ಮುಖ್ಯಮಂತ್ರಿಯ ಬೆಂಗಾವಲು ವಾಹನಗಳನ್ನು ಮತ್ತು ಇನ್ನೊಂದು ರಾಜ್ಯದ ಉಪಮುಖ್ಯಮಂತ್ರಿಯ ವಾಹನವನ್ನೂ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಚುನಾವಣಾ ಪ್ರಚಾರದಲ್ಲಿ ರಾಜಕಾರಣಿಗಳಿಗೆ ಸಹಾಯ ಮಾಡುತ್ತಿದ್ದ 106 ಸರಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದು ಚಂದಕ್ ತಿಳಿಸಿದರು.