ಲೋಕಸಭಾ ಚುನಾವಣೆ: ಮೂವರು ಪ್ರಮುಖ ಸಂಸದರಿಗೆ ಬಿಜೆಪಿ ಕೊಕ್?
ಬ್ರಿಜ್ ಭೂಷಣ್ ಸಿಂಗ್, ಪೂನಮ್ ಮಹಾಜನ್, ಜಮ್ಯಂಗ್ ನಂಗ್ಯಾಲ್ Photo: twitter
ಹೊಸದಿಲ್ಲಿ: ವಿವಾದಾತ್ಮಕ ಸಂಸದ ಮತ್ತು ಭಾರತದ ಕುಸ್ತಿ ಫೆಡರೇಷನ್ ನ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಸೇರಿದಂತೆ ಮೂವರು ಪ್ರಮುಖ ಸಂಸದರಿಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ. ಮುಂಬೈ ಉತ್ತರ ಕೇಂದ್ರ ಸಂಸದೆ ಪೂನಮ್ ಮಹಾಜನ್ ಹಾಗೂ ಲಡಾಖ್ ಸಂಸದ ಜಮ್ಯಂಗ್ ಸೆರಿಂಗ್ ನಂಗ್ಯಾಲ್ ಅವರನ್ನು ಈ ಬಾರಿ ಕಣಕ್ಕೆ ಇಳಿಸದಿರಲು ಪಕ್ಷ ನಿರ್ಧರಿಸಿದೆ ಎಂದು timesofindia ವರದಿ ಮಾಡಿದೆ.
ಸಿಂಗ್ ಬದಲಾಗಿ 1996-98ರ ಅವಧಿಯಲ್ಲಿ ಗೊಂಡಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರ ಪತ್ನಿ ಕೇತಕಿದೇವಿ ಸಿಂಗ್ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಆದರೆ ಈ ನಿರ್ಧಾರ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಈ ತಿಂಗಳ ಕೊನೆಗೆ ಕೋರ್ಟ್ ನೀಡುವ ತೀರ್ಪನ್ನು ಆಧರಿಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಸಿಂಗ್ ಕಣಕ್ಕಿಳಿಯುವುದು ಖಚಿತ ಎಂದು ಹೇಳಿದ್ದರೂ, ಮಹಿಳಾ ಕುಸ್ತಿಪಟುಗಳು ನೀಡಿರುವ ದೂರಿನ ಇತ್ಯರ್ಥವಾಗುವವರೆಗೆ ಸುಮ್ಮನಿರುವಂತೆ ಪಕ್ಷದ ಮುಖಂಡರು ಮನವೊಲಿಸಿದ್ದಾರೆ. ಕೇತಕಿ ದೇವಿಯವರನ್ನು ಕಣಕ್ಕೆ ಇಳಿಸುವ ಮೂಲಕ ಮಹಿಳಾ ನಾಯಕತ್ವಕ್ಕೆ ಉತ್ತೇಜನ ನೀಡುವ ಪಕ್ಷದ ನಿರ್ಧಾರಕ್ಕೆ ಬದ್ಧವಾಗಲಿದೆ ಎಂಬ ವಿಶ್ಲೇಷಣೆಗಳೂ ಕೇಳಿ ಬರುತ್ತಿವೆ.
ಸಿಂಗ್ ವಿರುದ್ಧದ ಆರೋಪಪಟ್ಟಿ ಅಂತಿಮಪಡಿಸುವ ಸಂಬಂಧ ದೆಹಲಿ ಕೋರ್ಟ್ ತನ್ನ ನಿರ್ಧಾರವನ್ನು ಕಳೆದವಾರ ಮುಂದೂಡಿತ್ತು.
ಮಹಾಜನ್ ಮತ್ತು ನಂಗ್ಯಾಲ್ ಅವರನ್ನು ಸಂಸದರಾಗಿ ಕಳಪೆ ಸಾಧನೆಯ ಆರೋಪದಲ್ಲಿ ಕಣಕ್ಕೆ ಇಳಿಸದಿರಲು ಪಕ್ಷ ನಿರ್ಧರಿಸಿದೆ. ಅವರ ಕ್ಷೇತ್ರಗಳಲ್ಲಿ ಋಣಾತ್ಮಕ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ಕ್ಷೇತ್ರಗಳಲ್ಲಿ ಐದನೇ ಹಂತದಲ್ಲಿ ಅಂದರೆ ಮೇ 20ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಮೇ 3 ಕೊನೆಯ ದಿನ.
ಮಹಾಜನ್ ಬದಲಾಗಿ ಯಾರನ್ನು ಕಣಕ್ಕೆ ಇಳಿಸಲಾಗುತ್ತದೆ ಎನ್ನುವುದನ್ನು ಪಕ್ಷ ಬಹಿರಂಗಪಡಿಸಿಲ್ಲ. ಆದರೆ ಹಿರಿಯ ವಕೀಲ ಉಜ್ವಲ್ ನಿಕಮ್ ಪ್ರತಿಷ್ಠಿತ ಮುಂಬೈ ಕೇಂದ್ರ ಉತ್ತರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಕೆಲ ಮಾಧ್ಯಮ ವರದಿಗಳು ಹೇಳಿವೆ. ಕಾಂಗ್ರೆಸ್ನ ಭದ್ರಕೋಟೆ ಎನಿಸಿದ ಈ ಕ್ಷೇತ್ರದಲ್ಲಿ 1989ರಿಂದೀಚೆಗೆ ಶಿವಸೇನೆ ಗೆಲ್ಲುತ್ತಾ ಬಂದಿದೆ. ಮೋದಿ ಅಲೆಯಿಂದಾಗಿ 2014 ಹಾಗೂ 2019ರಲ್ಲಿ ಮಹಾಜನ್ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು.