ಲೋಕಸಭಾ ಚುನಾವಣೆ| ಕಸಬ್ ಗೆ ಬಿರಿಯಾನಿ ಪೂರೈಸಲಾಗುತ್ತಿದೆ ಎಂದು ಸುಳ್ಳು ಹೇಳಿದ್ದ ಉಜ್ವಲ್ ನಿಕಮ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ: ಕಾಂಗ್ರೆಸ್ ಆರೋಪ
ಸುಪ್ರಿಯಾ ಶ್ರೀನೇಟ್ | PC : PTI
ಮುಂಬೈ: 26/11 ದಾಳಿಯ ಉಗ್ರ ಅಜ್ಮಲ್ ಕಸಬ್ ಗೆ ಜೈಲಿನಲ್ಲಿ ಬಿರಿಯಾನಿ ಪೂರೈಸಲಾಗುತ್ತಿದೆ ಎಂದು ಸುಳ್ಳು ಹೇಳಿ, ನಂತರ ಬೆತ್ತಲಾಗಿದ್ದ ವಕೀಲ ಉಜ್ವಲ್ ನಿಕಮ್ ಅವರನ್ನು ಮಹಿಳಾ ಸಂಸದೆಯೊಬ್ಬರ ಬದಲು ಬಿಜೆಪಿ ಲೋಕಸಭಾ ಚುನಾವಣಾ ಕಣಕ್ಕಿಳಿಸಿದೆ ಎಂದು ಶನಿವಾರ ಎಐಸಿಸಿ ವಕ್ತಾರೆ z ಆರೋಪಿಸಿದ್ದಾರೆ.
ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದೆ ಪೂನಮ್ ಮಹಾಜನ್ ಬದಲಿಗೆ ಮಾಜಿ ವಿಶೇಷ ಸಾರ್ವಜನಿಕ ಅಭಿಯೋಜಕ ನಿಕಮ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.
ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀ ನೇಟ್, ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವರ್ಷಾ ಗಾಯಕ್ವಾಡ್ ಅವರನ್ನು ಚುನಾಯಿಸುವ ಮೂಲಕ ಜನರು ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೈಲಿನಲ್ಲಿ ಅಜ್ಮಲ್ ಕಸಬ್ ಗೆ ಬಿರಿಯಾನಿ ಪೂರೈಸಲಾಗುತ್ತಿದೆ ಎಂದು ನಿಕಮ್ ಹೇಳಿದ್ದ ಸುಳ್ಳು ಕೆಲ ವರ್ಷಗಳ ಹಿಂದೆ ಬಯಲಾಗಿತ್ತು ಹಾಗೂ ಅವರೂ ತಮ್ಮ ಸುಳ್ಳನ್ನು ಒಪ್ಪಿಕೊಂಡಿದ್ದರು ಎಂದು ಅವರು ಆರೋಪಿಸಿದ್ದಾರೆ.
ಮುಂಬೈನ ಎಲ್ಲ ಆರು ಕ್ಷೇತ್ರಗಳಲ್ಲಿ ಮಹಾ ವಿಕಾಸ್ ಅಘಾಡಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶ್ರೀ ನೇಟ್, ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಅಭ್ಯರ್ಥಿಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮುಂಬೈ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಮುಂಬೈನ ಮೂಲ ನಿವಾಸಿಗಳಾದ ಮೀನುಗಾರರ ವಾಸನೆಯನ್ನು ಸಹಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ ಎಂದೂ ಅವರು ಆರೋಪಿಸಿದ್ದಾರೆ.
“ದೇಶದ ರಾಜಕೀಯ ವಾತಾವರಣವು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ತಿರುಗುತ್ತಿರುವುದರಿಂದ, ಕಾಂಗ್ರೆಸ್ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ ಏನೇನೋ ಮಾಡುತ್ತದೆ ಎಂದು ಬಿಜೆಪಿ ಸುಳ್ಳು ಹರಡುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಏನೂ ಮಾಡದೆ ಇರುವುದರಿಂದ, ಅದು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಕುರಿತು ಮಾತ್ರ ಮಾತನಾಡುತ್ತಿದೆ” ಎಂದು ಕಿಡಿ ಕಾರಿದರು.