ಎಪ್ರಿಲ್ 16ರಂದು ಲೋಕಸಭೆ ಚುನಾವಣೆ ?
ವದಂತಿಗೆ ತೆರೆ ಎಳೆದ ದಿಲ್ಲಿ ಮುಖ್ಯ ಚುನಾವಣಾಧಿಕಾರಿ
ಸಾಂದರ್ಭಿಕ ಚಿತ್ರ | Photo; PTI
ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆ ಎಪ್ರಿಲ್ 16ರಂದು ನಡೆಯಲಿದೆ ಎಂಬ ವಂದಂತಿಗೆ ಮುಖ್ಯ ಚುನಾವಣಾಧಿಕಾರಿ ಸೋಮವಾರ ತೆರೆ ಎಳೆದಿದ್ದಾರೆ.
ಭಾರತದ ಚುನಾವಣಾ ಆಯೋಗ ಲೋಕಸಭೆ ಚುನಾವಣೆಗೆ 2024 ಎಪ್ರಿಲ್ 16 ಅಂದಾಜು ದಿನಾಂಕ ಎಂದು ಹೇಳಿದೆ. ಉಲ್ಲೇಖಿಸಲು ಹಾಗೂ ಚುನಾವಣಾ ಯೋಜನೆಯ ಆರಂಭ ಹಾಗೂ ಅಂತ್ಯದ ದಿನಾಂಕವನ್ನು ಲೆಕ್ಕ ಹಾಕುವ ಉದ್ದೇಶದಿಂದ ಈ ದಿನಾಂಕ ನೀಡಲಾಗಿದೆ ಎಂದು ಅವರ ಅಧಿಸೂಚನೆ ತಿಳಿಸಿತ್ತು. ಈ ಅಧಿಸೂಚನೆಯನ್ನು ದಿಲ್ಲಿಯ ಎಲ್ಲಾ 11 ಜಿಲ್ಲಾ ಚುನಾವಣಾಧಿಕಾರಿಗಳಿಗೆ ರವಾನಿಸಲಾಗಿತ್ತು. ಅನಂತರ ಸ್ವಲ್ಪ ಸಮಯದ ಬಳಿಕ ದಿಲ್ಲಿ ಮುಖ್ಯ ಚುನಾವಣಾಧಿಕಾರಿಯ ಕಚೇರಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ಈ ದಿನಾಂಕ ಉಲ್ಲೇಖಕ್ಕೆ ಮಾತ್ರ ಎಂದು ಒತ್ತಿ ಹೇಳಿದೆ.
2024ರ ಲೋಕಸಭೆ ಚುನಾವಣೆಗೆ 2024 ಎಪ್ರಿಲ್ 16 ತಾತ್ಕಾಲಿಕ ದಿನಾಂಕವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಕೋರಿ ದಿಲ್ಲಿ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯ ಸುತ್ತೋಲೆ ಉಲ್ಲೇಖಿಸಿ ಕೆಲವು ಮಾಧ್ಯಮಗಳಿಂದ ಪ್ರಶ್ನೆಗಳು ಬಂದಿವೆ ಅದು ಹೇಳಿದೆ.
‘‘ಭಾರತದ ಚುನಾವಣಾ ಆಯೋಗದ ಚುನಾವಣಾ ಯೋಜನೆಯಂತೆ ಚಟುವಟಿಕೆಗಳನ್ನು ಯೋಜಿಸಲು ಅಧಿಕಾರಿಗಳಿಗೆ ಉಲ್ಲೇಖಕ್ಕೆ ಮಾತ್ರ ಈ ದಿನಾಂಕವನ್ನು ಪ್ರಸ್ತಾವಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ’’ ಎಂದು ‘ಎಕ್ಸ್’ನ ಟಿಪ್ಪಣಿಯಲ್ಲಿ ಅದು ತಿಳಿಸಿದೆ.